ADVERTISEMENT

ದೆಹಲಿ ಯುವತಿ ಅಪಘಾತ ಪ್ರಕರಣ: ಐವರು ಆರೋಪಿಗಳು ಪೊಲೀಸರ ವಶಕ್ಕೆ

ಪಿಟಿಐ
Published 2 ಜನವರಿ 2023, 11:14 IST
Last Updated 2 ಜನವರಿ 2023, 11:14 IST
   

ನವದೆಹಲಿ: ನಗರದ ಹೊರಭಾಗದ ಸುಲ್ತಾನ್‌ಪುರಿಯಲ್ಲಿನ ಯುವತಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು 3 ದಿನಗಳ ಕಾಲ ಪೊಲೀಸ್‌ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.


ಸ್ಕೂಟಿಗೆ ಕಾರು ಡಿಕ್ಕಿ ಹೊಡೆದಿದ್ದರಿಂದ 20 ವರ್ಷದ ಯುವತಿಯೊಬ್ಬರು ಮೃತಪಟ್ಟಿದ್ದು, ಕಾರಿನಡಿ ಸಿಲುಕಿದ್ದ ಆಕೆಯ ಮೃತದೇಹವನ್ನು ಸುಮಾರು 4 ಕಿ.ಮೀ.ವರೆಗೂ ಎಳೆದೊಯ್ದಿರುವ ಘಟನೆ ದೆಹಲಿಯ ಹೊರಭಾಗದ ಸುಲ್ತಾನ್‌ಪುರಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿತ್ತು.

ಮಾರುತಿ ಬಲೆನೊ ಕಾರಿನಲ್ಲಿದ್ದ ಐವರನ್ನು ಬಂಧಿಸಿದ ದೆಹಲಿ ಪೊಲೀಸರು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ADVERTISEMENT

ರಸ್ತೆಯ ಮೇಲೆ ಯುವತಿಯ ಮೃತದೇಹ ನಗ್ನಾವಸ್ಥೆಯಲ್ಲಿ ಬಿದ್ದಿರುವ, ಆಕೆಯ ಕಾಲುಗಳು ಮುರಿದಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ಹರಿದಾಡಿತ್ತು.

‘ಕುತುಬ್‌ಗಡ ಪ್ರದೇಶದತ್ತ ಹೊರಟಿದ್ದ ಕಾರಿನಡಿ ಯುವತಿಯ ಮೃತದೇಹ ಸಿಲುಕಿತ್ತು. ರೋಹಿಣಿ ಜಿಲ್ಲೆಯ ಖಂಜಾವಲಾ ಪೊಲೀಸ್‌ ಠಾಣೆಗೆ ಬೆಳಿಗ್ಗೆ 3.24ರ ಸುಮಾರಿಗೆ ಈ ಕುರಿತ ಮಾಹಿತಿ ಲಭಿಸಿತ್ತು. ಸ್ಥಳಕ್ಕೆ ಹೋಗಿದ್ದ ಸಿಬ್ಬಂದಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗೋಲ್‌ ಪುರಿಯಲ್ಲಿರುವ ಸಂಜಯ್‌ ಗಾಂಧಿ ಸ್ಮಾರಕ ಆಸ್ಪತ್ರೆಗೆ ರವಾನಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದರು.

‘ಯುವತಿಯ ಕಾಲು ಕಾರಿನ ಚಕ್ರವೊಂದರಲ್ಲಿ ಸಿಲುಕಿಕೊಂಡಿತ್ತು. ಆಕೆಯ ಮೃತದೇಹವನ್ನು ಸುಮಾರು 4 ಕಿ.ಮೀ. ವರೆಗೂ ಎಳೆದೊಯ್ಯಲಾಗಿದೆ. ಈ ಸಂಬಂಧ ದೀಪಕ್‌ ಖನ್ನಾ (26), ಅಮಿತ್‌ ಖನ್ನಾ (25), ಕೃಷ್ಣಾ (27), ಮಿಥುನ್‌ (26) ಮತ್ತು ಮನೋಜ್‌ ಮಿತ್ತಲ್‌ ಎಂಬುವರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಐಪಿಸಿ ಸೆಕ್ಷನ್‌ 279 ಮತ್ತು 304–ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಡಿಸಿಪಿ ಹರೇಂದ್ರಕುಮಾರ್‌ ಸಿಂಗ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.