ADVERTISEMENT

ದೆಹಲಿ: ಸಂಚಾರಕ್ಕೆ ರೈತ ಪ್ರತಿಭಟನೆಯ ಗಾಜಿಪುರ ಗಡಿ ಭಾಗಶಃ ಮುಕ್ತ

ಪಿಟಿಐ
Published 16 ಡಿಸೆಂಬರ್ 2021, 11:09 IST
Last Updated 16 ಡಿಸೆಂಬರ್ 2021, 11:09 IST
ಗಾಜಿಪುರ ಗಡಿ
ಗಾಜಿಪುರ ಗಡಿ   

ನವದೆಹಲಿ: ರೈತರ ಪ್ರತಿಭಟನೆಯಿಂದಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಮುಚ್ಚಲಾಗಿದ್ದ ದೆಹಲಿಯ ಗಾಜಿಪುರ ಗಡಿಯನ್ನು ವಾಹನ ಸಂಚಾರಕ್ಕೆ ಭಾಗಶಃ ತೆರೆಯಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಗಾಜಿಪುರ ಗಡಿಯ ಸರಕು ಸಾಗಣೆ ಹಾಗೂ ಪ್ರಯಾಣಿಕರ ವಾಹನ ಸಂಚಾರಕ್ಕೆ ಒಂದು ಮಾರ್ಗವನ್ನು ಮುಕ್ತಗೊಳಿಸಲಾಗಿದೆ. ವೈಶಾಲಿ, ಗಾಜಿಯಾಬಾದ್‌ನಿಂದ ಬರುವವರು ಈ ಮಾರ್ಗದ ಮೂಲಕ ದೆಹಲಿಗೆ ಬರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಪ್ರತಿಭಟನೆ ಸಂದರ್ಭದಲ್ಲಿ ರೈತರು ದೆಹಲಿ ಪ್ರವೇಶಿಸದಂತೆ ಸಿಂಗು ಗಡಿಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಬುಧವಾರ ತೆರವು ಮಾಡಲಾಗಿದ್ದು, ಎರಡು ಮಾರ್ಗಗಳನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಎಲ್ಲಾ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ ಹೊರ ವಲಯ) ಬ್ರಿಜೇಶ್ ಯಾದವ್ ಹೇಳಿದ್ದಾರೆ.

ADVERTISEMENT

ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಿದ್ದು ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದ ನಂತರ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಪ್ರತಿಭಟನೆಯನ್ನು ಸ್ಥಗಿತಗೊಳಿಸಿತ್ತು. ಆದ್ದರಿಂದ ರೈತರು ಶನಿವಾರದಿಂದ ಪ್ರತಿಭಟನಾ ಸ್ಥಳವನ್ನು ತೊರೆಯಲು ಪ್ರಾರಂಭಿಸಿದ್ದರು.

ಸಿಂಗು ಗಡಿಯ ಜೊತೆಗೆ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ಕಳೆದ ವರ್ಷದ ನವೆಂಬರ್ 26ರಂದು ದೆಹಲಿಯ ಟಿಕ್ರಿ ಹಾಗೂ ಗಾಜಿಪುರ ಗಡಿಗಳನ್ನು ಬಂದ್‌ ಮಾಡಿದ್ದರು. ಟಿಕ್ರಿ ಗಡಿಯಲ್ಲಿ ಈಗಾಗಲೇ ವಾಹನ ಸಂಚಾರಕ್ಕೆ ರಸ್ತೆಗಳನ್ನು ಮುಕ್ತಗೊಳಿಸಲಾಗಿದ್ದು, ಸಂಚಾರ ದಟ್ಟಣೆ ಹೆಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.