ADVERTISEMENT

ದೆಹಲಿ: ಗಂಗಾರಾಮ್‌ ಆಸ್ಪತ್ರೆಗೆ 5 ಟನ್‌ ಆಮ್ಲಜನಕ ಪೂರೈಕೆ

ಪಿಟಿಐ
Published 25 ಏಪ್ರಿಲ್ 2021, 6:06 IST
Last Updated 25 ಏಪ್ರಿಲ್ 2021, 6:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ನಗರದ ಸರ್‌ ಗಂಗಾರಾಮ್‌ ಆಸ್ಪತ್ರೆಗೆ ಭಾನುವಾರ 5 ಮೆಟ್ರಿಕ್‌ ಟನ್‌ ಆಮ್ಲಜನಕವನ್ನು ಪೂರೈಕೆ ಮಾಡಲಾಗಿದೆ. ಕಳೆದ ಮೂರು ದಿನಗಳಲ್ಲಿ ಆಸ್ಪತ್ರೆಗೆ ಪೂರೈಕೆಯಾದ ಗರಿಷ್ಠ ಪ್ರಮಾಣ ಇದಾಗಿದೆ.

ಆಸ್ಪತ್ರೆಯ ಐಸಿಯುನಲ್ಲಿ 130 ರೋಗಿಗಳಿದ್ದು, ಈ ಪೈಕಿ 30 ಜನರಿಗೆ ವೆಂಟಿಲೇಟರ್‌ ಅಳವಡಿಸಲಾಗಿದೆ ಎಂದು ಶನಿವಾರ ರಾತ್ರಿ 10.30ಕ್ಕೆ ಹೇಳಿಕೆ ನೀಡಿದ್ದ ಆಸ್ಪತ್ರೆಯ ಆಡಳಿತ, ತನ್ನಲ್ಲಿರುವ ಆಮ್ಲಜನಕ ಒಂದು ಗಂಟೆವರೆಗೆ ಮಾತ್ರ ಸಾಕಾಗುತ್ತದೆ ಎಂದಿತ್ತು.

ನಂತರ, ಎಎಪಿ ಮುಖಂಡ ರಾಘವ್‌ ಛಡ್ಡಾ ಅವರ ಪ್ರಯತ್ನದಿಂದಾಗಿ ರಾತ್ರಿ 12.20ರ ವೇಳೆಗೆ ಒಂದು ಟ್ಯಾಂಕರ್‌ ಆಮ್ಲಜನಕ ಪೂರೈಕೆಯಾಯ್ತು ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ADVERTISEMENT

ನಂತರ, ‘ನಸುಕಿನ 4.15 ಗಂಟೆಗೆ 5 ಮೆಟ್ರಿಕ್‌ ಟನ್‌ ಆಮ್ಲಜನಕ ಆಸ್ಪತ್ರೆ ತಲುಪಿತು. ಇದು ಸಹ 11–12 ಗಂಟೆಗಳ ಅವಧಿಗೆ ಸಾಕಾಗಬಹುದು’ ಎಂದು ಆಸ್ಪತ್ರೆಯ ವಕ್ತಾರರೊಬ್ಬರು ಹೇಳಿದರು.

ಆಮ್ಲಜನಕ ಕೊರತೆ ಪರಿಣಾಮ, ತೀವ್ರ ಸೋಂಕಿದ್ದ 25 ರೋಗಿಗಳು ಆಸ್ಪತ್ರೆಯಲ್ಲಿ ಶುಕ್ರವಾರ ಸಾವನ್ನಪ್ಪಿದ್ದರು.

‘ತುರ್ತಾಗಿ ನೆರವು ನೀಡಬೇಕು ಎಂದು ನಾನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಮನವಿ ಮಾಡುತ್ತೇನೆ’ ಎಂದು ಆಸ್ಪತ್ರೆಯ ಚೇರಮನ್‌ ಡಾ.ಡಿ.ಎಸ್‌.ರಾಣಾ ಹೇಳಿದರು.

‘ಸರ್ಕಾರ ಒಂದೆಡೆ ಕೋವಿಡ್‌ ರೋಗಿಗಳಿಗಾಗಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಇನ್ನೊಂದೆಡೆ ಅಗತ್ಯವಿರುವಷ್ಟು ಆಮ್ಲಜನಕವನ್ನು ಪೂರೈಕೆ ಮಾಡುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಾವು ಹೇಗೆ ಕಾರ್ಯ ನಿರ್ವಹಿಸಬೇಕು’ ಎಂದೂ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.