ನವದೆಹಲಿ: ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ 241 ಮಂದಿ ಪ್ರಯಾಣಿಕರು ಸೇರಿ 265 ಮಂದಿ ಸಾವಿಗೀಡಾದ ದುರಂತದ ಒಂದು ದಿನದ ನಂತರ, ವಿಮಾನಯಾನ ಮೇಲ್ವಿಚಾರಣಾ ಸಂಸ್ಥೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು(ಡಿಜಿಸಿಎ) ಬೋಯಿಂಗ್ 787 ಡ್ರೀಮ್‌ಲೈನರ್ ಜೆಟ್‌ಗಳ ಸುರಕ್ಷತಾ ತಪಾಸಣೆ ಹೆಚ್ಚಿಸುವಂತೆ ಏರ್ ಇಂಡಿಯಾಗೆ ಸೂಚಿಸಿದೆ.
ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ವೈಮಾನಿಕ ಸಂಸ್ಥೆಯಲ್ಲಿ 26 ಬೋಯಿಂಗ್ 787-8 ಮತ್ತು 7 ಬೋಯಿಂಗ್ 787-9 ವಿಮಾನಗಳಿವೆ.
Genx ಎಂಜಿನ್‌ಗಳನ್ನು ಹೊಂದಿರುವ ತನ್ನ ಬೋಯಿಂಗ್ 787-8 ಮತ್ತು 787-9 ವಿಮಾನಗಳಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಹೆಚ್ಚುವರಿ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲು ಡಿಜಿಸಿಎ ಏರ್ ಇಂಡಿಯಾಕ್ಕೆ ನಿರ್ದೇಶನ ನೀಡಿದೆ.
ಡಿಜಿಸಿಎ ಪ್ರಾದೇಶಿಕ ಕಚೇರಿಗಳ ಸಮನ್ವಯದೊಂದಿಗೆ ಈ ಸಂಬಂಧಿತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಗುರುವಾರ ಮಧ್ಯಾಹ್ನ ಟೇಕ್ ಆಫ್ ಆದ ಕೂಡಲೇ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬರು ಮಾತ್ರ ಬದುಕುಳಿದರು.
ಜನವರಿ 15ರಿಂದ ಜಾರಿಗೆ ಬರುವಂತೆ ಡಿಜಿಸಿಎ ಬೋಯಿಂಗ್ 787 ವಿಮಾನಗಳ ಹಲವು ಒನ್ ಟೈಮ್ ಪರಿಶೀಲನೆಗಳಿಗೆ ಆದೇಶಿಸಿದೆ. ಇದರಲ್ಲಿ ಇಂಧನ ನಿಯತಾಂಕ ಮೇಲ್ವಿಚಾರಣೆ ಮತ್ತು ಸಂಬಂಧಿತ ವ್ಯವಸ್ಥೆಯ ಪರಿಶೀಲನೆಗಳು ಸೇರಿವೆ.
ಕ್ಯಾಬಿನ್ ಏರ್ ಕಂಪ್ರೆಸರ್ ಮತ್ತು ಸಂಬಂಧಿತ ವ್ಯವಸ್ಥೆಗಳ ಪರಿಶೀಲನೆ, ಎಲೆಕ್ಟ್ರಾನಿಕ್ ಎಂಜಿನ್ ನಿಯಂತ್ರಣ ವ್ಯವಸ್ಥೆಯ ಪರೀಕ್ಷೆ, ಎಂಜಿನ್ ಇಂಧನ ಚಾಲಿತ ಆಕ್ಟಿವೇಟರ್-ಕಾರ್ಯಾಚರಣಾ ಪರೀಕ್ಷೆ ಮತ್ತು ತೈಲ ವ್ಯವಸ್ಥೆಯ ಪರಿಶೀಲನೆಗೂ ಸಹ ಆದೇಶಿಸಲಾಗಿದೆ.
ಇದಲ್ಲದೆ, ಹೈಡ್ರಾಲಿಕ್ ವ್ಯವಸ್ಥೆಯ ಸೇವಾ ಸಾಮರ್ಥ್ಯ ಪರಿಶೀಲನೆ ಮತ್ತು ಟೇಕ್ ಆಫ್ ನಿಯತಾಂಕಗಳ ಪರಿಶೀಲನೆಯನ್ನು ಕೈಗೊಳ್ಳಲು ಡಿಜಿಸಿಎ ನಿರ್ದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.