ಹರಿದ್ವಾರ (ಪಿಟಿಐ): ‘ಪೊಲೀಸರು ಮಧ್ಯ ಪ್ರವೇಶಿಸಿದ್ದರಿಂದ ಗುರುವಾರದಿಂದ ಆರಂಭವಾಗಬೇಕಿದ್ದ ಮೂರು ದಿನಗಳ ‘ವಿಶ್ವ ಧರ್ಮ ಸಂಸದ್’ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ’ ಎಂದು ಯತಿ ನರಸಿಂಹಾನಂದ್ ಅವರು ತಿಳಿಸಿದರು.
‘ಶ್ರೀಪಂಚಮ ದಶನಾಮ್ ಜೂನಾ ಅಖಾಡ’ವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಬರುವವರಿಗೆ ಅಡುಗೆ ಮಾಡಲು ಬಂದಿದ್ದ ಬಾಣಸಿಗರನ್ನು ಪೊಲೀಸರು ವಾಪಸು ಕಳುಹಿಸಿದರು ಮತ್ತು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ನಿರ್ಮಿಸಲಾಗಿದ್ದ ಟೆಂಟ್‌ಗಳನ್ನು ಕಿತ್ತೊಗೆದರು’ ಎಂದು ದೂರಿದರು.
‘ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದನ್ನು ಖಂಡಿಸಿ ‘ಶ್ರೀಪಂಚಮ ದಶನಾಮ್ ಜೂನಾ ಅಖಾಡ’ದ ಕೇಂದ್ರ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಅಖಾಡ ಹೇಳಿತ್ತು.
‘ಇಂಥ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ’ ಎನ್ನುವ ನೋಟಿಸ್ ಅನ್ನೂ ಪೊಲೀಸರು ಅಂಟಿಸಿ ಹೋಗಿದ್ದಾರೆ. ಸುಪ್ರೀಂ ಕೋರ್ಟ್ ಹೆಸರಿನಲ್ಲಿ ಗೂಂಡಾಗಿರಿ ನಡೆಸಲಾಗುತ್ತಿದೆ. ಇದನ್ನು ವಿರೋಧಿಸಿ ಶನಿವಾರ ಸುಪ್ರೀಂ ಕೋರ್ಟ್‌ವರೆಗೂ ಪಾದಯಾತ್ರೆ ನಡೆಸಲಾಗುವುದು’ ಎಂದರು.
‘ಇಸ್ಲಾಂ ಅಥವಾ ಕುರಾನ್ ಕುರಿತು ನಾನೇನಾದರೂ ತಪ್ಪು ಮಾತನಾಡಿದ್ದರೆ ಸುಪ್ರೀಂ ಕೋರ್ಟ್ ನನಗೆ ಯಾವ ಶಿಕ್ಷೆ ನೀಡಿದರೂ ಅದನ್ನು ಅನುಭವಿಸಲು ಸಿದ್ಧ. ಸತ್ಯ ಹೇಳಿದರೆ ಅದನ್ನು ದ್ವೇಷ ಭಾಷಣ ಎನ್ನಲಾಗದು. ಬಾಂಗ್ಲಾದೇಶ ಅಥವಾ ಪಾಕಿಸ್ತಾನದಲ್ಲಿ ನಡೆದ ಹಿಂದೂಗಳ ಹತ್ಯೆ ಕುರಿತು ಶ್ರದ್ಧಾಂಜಲಿ ಸಲ್ಲಿಸುವ ಹಕ್ಕೂ ನನಗಿಲ್ಲವೇ’ ಎಂದು ಪ್ರಶ್ನಿಸಿದರು.
ಈ ಹಿಂದೆ ನಡೆದಿದ್ದ ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದ ಪ್ರಕರಣದಲ್ಲಿ ನರಸಿಂಹಾನಂದ್ ಅವರಿಗೆ ಎರಡು ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು. ನರಸಿಂಹಾನಂದ್ ಅವರು ಅಖಾಡದ ಮಹಾಮಂಡಲೇಶ್ವರ ಕೂಡ ಆಗಿದ್ದಾರೆ.
‘ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಇಲ್ಲ’
‘ಧರ್ಮ ಸಂಸದ್’ ಕಾರ್ಯಕ್ರಮ ಸಂಬಂಧ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಉತ್ತರ ಪ್ರದೇಶದ ಅಧಿಕಾರಿಗಳು ಉಲ್ಲಂಘಿಸಿದ್ದಾರೆ. ಆದ್ದರಿಂದ ಇವರ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ಎಂದು ಕೋರಿ ಪ್ರಗತಿಪರರು ಹಾಗೂ ಮಾಜಿ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ‘ಅಲ್ಲೇನಾಗುತ್ತಿದೆ ಎನ್ನುವುದರ ಕುರಿತು ನಿರಂತರ ನಿಗಾ ಇರಿಸಿ. ನ್ಯಾಯಾಲಯದ ಆದೇಶಗಳು ಉಲ್ಲಂಘಟನೆಯಾಗದಂತೆ ನೋಡಿಕೊಳ್ಳಿ’ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಅವರು ಉತ್ತರ ಪ್ರದೇಶ ಸರ್ಕಾರದ ಪರ ವಕೀಲ ಕೆ.ಎಂ. ನಟರಾಜ್ ಅವರಿಗೆ ಸೂಚಿಸಿದರು. ‘ದ್ವೇಷ ಭಾಷಣ ಮಾಡುವವರ ವಿರುದ್ಧ ಯಾವುದೇ ದೂರು ದಾಖಲಾಗದಿದ್ದರೂ ಅಂಥವರ ವಿರುದ್ಧ ಪ್ರಕರಣ ದಾಖಲಿಸಿ’ ಎಂದು ಎಲ್ಲ ರಾಜ್ಯಗಳು ಹಾಗೂ ಎಲ್ಲ ಕೇಂದ್ರಾಡಳಿತ ಪ್ರದೇಶಗಳಿಗೆ 2023ರ ಏಪ್ರಿಲ್ 28ರಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.