ADVERTISEMENT

ಧೃತಿಗೆಡಬೇಡಿ: ರಾಹುಲ್‌ಗೆ ಶರದ್ ಪವಾರ್‌ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 31 ಮೇ 2019, 19:05 IST
Last Updated 31 ಮೇ 2019, 19:05 IST
ರಾಹುಲ್
ರಾಹುಲ್   

ನವದೆಹಲಿ: ‘ರಾಜಕಾರಣದಲ್ಲಿ ಸೋಲು– ಗೆಲುವು ಸಾಮಾನ್ಯ, ಅದರಿಂದ ಧೃತಿಗೆಡಬೇಡಿ’ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಧೈರ್ಯ ತುಂಬಿದ್ದಾರೆ.

ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಹೀನಾಯ ಸೋಲಿನ ನಂತರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವ ರಾಹುಲ್, ಪಕ್ಷದ ಮುಖಂಡರನ್ನು ಭೇಟಿಯಾಗಲೂ ನಿರಾಕರಿಸಿದ್ದರು. ಅವರ ರಾಜೀನಾಮೆಯನ್ನು ಕಾಂಗ್ರೆಸ್‌ನ ಕೇಂದ್ರ ಕಾರ್ಯಕಾರಿ
ಸಮಿತಿ ಸ್ವೀಕರಿಸಲಿಲ್ಲ. ಆದರೆ ಗುರುವಾರ ರಾಹುಲ್‌ ಅವರು ಪವಾರ್ ಮತ್ತು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಪವಾರ್‌ ಜೊತೆ ಒಂದು ಗಂಟೆ ಕಾಲ ಮಾತುಕತೆ ನಡೆಸಿದ ರಾಹುಲ್‌ ಚುನಾವಣಾ ಫಲಿತಾಂಶದ ವಿಶ್ಲೇಷಣೆ ನಡೆಸಿದ್ದಾರೆ. ಮೈತ್ರಿ ಮುಂದುವರಿಸಲು ಮತ್ತು ಮಹಾರಾಷ್ಟ್ರದಲ್ಲಿ ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಲು ಇಬ್ಬರು ನಾಯಕರು ನಿರ್ಧರಿಸಿದ್ದಾರೆ.

ADVERTISEMENT

ಈ ವರ್ಷದಲ್ಲೇ ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್ ಹಾಗೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಯುವ ಸಂಭವವಿದೆ.

ರಾಹುಲ್‌ರನ್ನು ಜವಾಹರ್‌ಲಾಲ್‌ ನೆಹರೂಗೆ ಹೋಲಿಸಿದ ಡಿಎಂಕೆ

ಚೆನ್ನೈ: ರಾಹುಲ್‌ ಗಾಂಧಿ ಅವರನ್ನು ಡಿಎಂಕೆ ಜವಾಹರ್‌ಲಾಲ್‌ ನೆಹರೂ ಅವರಿಗೆ ಹೋಲಿಸಿದ್ದು ಅವರಂತಹ ವಿಶಾಲ ಮನಸ್ಸಿನ ವ್ಯಕ್ತಿ ಕಾಂಗ್ರೆಸ್‌ಗೆ ಅಗತ್ಯವಿದೆ ಎಂದು ಡಿಎಂಕೆಶುಕ್ರವಾರ ಹೇಳಿದೆ.

ಪಕ್ಷದ ಅಧ್ಯಕ್ಷ ಸ್ಥಾನವನ್ನು ರಾಹುಲ್‌ ತ್ಯಜಿಸಬಾರದೆಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ಹೇಳಿದ ಮರುದಿನ ಡಿಎಂಕೆಯ ಮುಖವಾಣಿ ‘ಮುರಸೋಳಿ’ ತನ್ನ ಸಂಪಾದಕೀಯದಲ್ಲಿ‘ಚುನಾವಣಾ ರಾಜಕೀಯಕ್ಕಷ್ಟೇ ರಾಹುಲ್ ತಮ್ಮನ್ನು ಸೀಮಿತಗೊಳಿಸಿಕೊಂಡಿಲ್ಲ’ ಎಂದಿದೆ.

ರಾಹುಲ್‌ ಅವರ ರಾಜಕೀಯ ಪಯಣವು ಬೇರುಮಟ್ಟದಿಂದ ಪ್ರಗತಿಯನ್ನು ಕಾಣುತ್ತಿದೆ. ಹಾಗಾಗಿ ಗೆಲವು ಸಾಧ್ಯವಿದೆ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.