ADVERTISEMENT

ಮೊಬೈಲ್ ಸಂಖ್ಯೆ‌, ಗುರುತಿನ ಪುರಾವೆ ಕೇಳಬೇಡಿ: ದೆಹಲಿ ಹೈಕೋರ್ಟ್‌

ಮನೆ ಇಲ್ಲದ ಮಾನಸಿಕ ಅಸ್ವಸ್ಥರಿಗೆ ಕೋವಿಡ್‌ ಪರೀಕ್ಷೆ

ಪಿಟಿಐ
Published 24 ಜುಲೈ 2020, 11:21 IST
Last Updated 24 ಜುಲೈ 2020, 11:21 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ:ಮನೆಯೇ ಇಲ್ಲದ ಮಾನಸಿಕ ಅಸ್ವಸ್ಥರಿಗೆ ಕೊರೊನಾ ಸೋಂಕು ಪತ್ತೆ‌ ಪರೀಕ್ಷೆ ಮಾಡುವ ಸಂಬಂಧ ಮೊಬೈಲ್‌ ಸಂಖ್ಯೆ, ಗುರುತಿನ ಪತ್ರ, ವಾಸಸ್ಥಾನ ಪ್ರಮಾಣ ಪತ್ರ ಹಾಗೂ ಭಾವಚಿತ್ರವನ್ನು ಕೇಳಕೂಡದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿಗೆ (ಐಸಿಎಂಆರ್‌) ದೆಹಲಿ ಹೈಕೋರ್ಟ್‌ ಶುಕ್ರವಾರ ಸೂಚನೆ ನೀಡಿದೆ.

ಮುಖ್ಯನ್ಯಾಯಮೂರ್ತಿ ಡಿ.ಎನ್‌.ಪಟೇಲ್‌ ಹಾಗೂ ನ್ಯಾಯಮೂರ್ತಿ ಪ್ರತೀಕ್‌ ಜಲನ್‌ ಅವರಿರುವ ನ್ಯಾಯಪೀಠ, ಈ ವಿಷಯಕ್ಕೆ ಸಂಬಂಧಿಸಿದಂತೆ ಆದೇಶ ಅಥವಾ ಸುತ್ತೋಲೆ ಹೊರಡಿಸುವ ಮೂಲಕ ಸ್ಪಷ್ಟೀಕರಣ ನೀಡಿ ಎಂದೂ ಸೂಚಿಸಿತು.

ಜೂನ್‌ 19ರಂದು ಸಲಹೆ ನೀಡಿದ್ದ ಐಸಿಎಂಆರ್‌, ಕೋವಿಡ್‌ ಪರೀಕ್ಷೆಗೆ ಒಳಗಾಗುವ ಪ್ರತಿಯೊಬ್ಬ ನಾಗರಿಕರು ಸರ್ಕಾರ ನೀಡಿರುವ ಗುರುತಿನ ಪುರಾವೆ, ಮೊಬೈಲ್‌ ಸಂಖ್ಯೆ ಹೊಂದಿರಬೇಕು ಎಂದು ತಿಳಿಸಿತ್ತು. ಪರೀಕ್ಷೆಗೆ ಒಳಗಾದವರ ಬಗ್ಗೆ ಮಾಹಿತಿ ಸಂಗ್ರಹಿಸಲು, ಅವರ ಪತ್ತೆ ಮಾಡುವಲ್ಲಿ ಇವು ಸಹಕಾರಿ ಎಂದೂ ತಿಳಿಸಿತ್ತು.

ADVERTISEMENT

‘ಮಾನಸಿಕ ಅಸ್ವಸ್ಥರಾಗಿದ್ದು, ಮನೆ ಇಲ್ಲದವರಿಗಾಗಿ ಕೋವಿಡ್‌ ಪರೀಕ್ಷೆ ನಡೆಸಲು ಶಿಬಿರವೊಂದನ್ನು ಆಯೋಜನೆ ಮಾಡಿ’ ಎಂದೂ ನ್ಯಾಯಪೀಠ ಸಲಹೆ ನೀಡಿತು.

‘ಕೋರ್ಟ್‌ ನೀಡಿರುವ ನಿರ್ದೇಶನವನ್ನು ಸರ್ಕಾರದ ಗಮನಕ್ಕೆ ತಂದು, ಸೂಕ್ತ ಕ್ರಮ ಕೈಗೊಳ್ಳಲು ಸಮಯ ಬೇಕು’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಚೇತನ್‌ ಶರ್ಮಾ ನ್ಯಾಯಪೀಠಕ್ಕೆ ತಿಳಿಸಿದರು.

ನಂತರ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿ ನ್ಯಾಯಪೀಠ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.