ADVERTISEMENT

ಮಲಪ್ಪುರಂ: ಪ್ರಸಿದ್ಧ ಆಯುರ್ವೇದ ವೈದ್ಯ ಡಾ.ಪಿ.ಕೆ ವಾರಿಯರ್ ನಿಧನ

ಪಿಟಿಐ
Published 10 ಜುಲೈ 2021, 10:13 IST
Last Updated 10 ಜುಲೈ 2021, 10:13 IST
ಡಾ.ಪಿ.ಕೆ ವಾರಿಯರ್- ಟ್ವಿಟರ್‌ ಚಿತ್ರ
ಡಾ.ಪಿ.ಕೆ ವಾರಿಯರ್- ಟ್ವಿಟರ್‌ ಚಿತ್ರ   

ಮಲಪ್ಪುರಂ: ಪ್ರಸಿದ್ಧ ಆಯುರ್ವೇದ ವೈದ್ಯ, ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಯ ಟ್ರಸ್ಟಿ ಡಾ.ಪಿ.ಕೆ ವಾರಿಯರ್ ಅವರು(100) ಇಲ್ಲಿ ಶನಿವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ಭಾರತ ಸರ್ಕಾರವು 1999ರಲ್ಲಿ ಪದ್ಮಶ್ರೀ ಮತ್ತು 2010ರಲ್ಲಿ ಪದ್ಮಭೂಷಣ ನೀಡುವ ಮೂಲಕ ಪಿ.ಕೆ ವಾರಿಯರ್‌ ಅವರನ್ನು ಗೌರವಿಸಿದೆ.

ವಿಶ್ವದಾದ್ಯಂತ ಶಾಸ್ತ್ರೀಯ ಆಯುರ್ವೇದ ಚಿಕಿತ್ಸೆಯನ್ನು ಜನಪ್ರಿಯಗೊಳಿಸಿದ ಖ್ಯಾತಿ ಡಾ. ಪಿ.ಕೆ ವಾರಿಯರ್ ಅವರಿಗೆ ಸಲ್ಲುತ್ತದೆ.

1921ರ ಜೂನ್‌ 5ರಂದು ಜನಿಸಿದ ಪನ್ನಿಯಂಪಿಲ್ಲಿ ಕೃಷ್ಣಂಕುಟ್ಟಿ ವಾರಿಯರ್ ಅವರು, ಆರ್ಯುರ್ವೇದ ಪದ್ಧತಿಗೆ ಜಗತ್ತಿನಾದ್ಯಂತ ಅಧಿಕೃತ ಮಾನ್ಯತೆ ದೊರಕಿಸಿಕೊಡಲು ಶ್ರಮಿಸಿದ್ದರು.

ತಮ್ಮ 20ನೇ ವಯಸ್ಸಿನಲ್ಲಿ ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಗೆ ವಾರಿಯರ್‌ ಸೇರಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಆಯುರ್ವೇದ ಅಧ್ಯಯನವನ್ನು ಕೈಬಿಟ್ಟು ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಆಂದೋಲನದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ರಾಜಕೀಯ, ಹೋರಾಟ ತಮ್ಮಿಂದ ಸಾಧ್ಯವಾಗುವುದಿಲ್ಲ ಎಂದು ಅರಿತು ಕೆಲ ದಿನಗಳ ಬಳಿಕ ಆಯುರ್ವೇದ ಅಧ್ಯಯನದಲ್ಲಿ ಮತ್ತೆ ತೊಡಗಿಸಿಕೊಂಡಿದ್ದರು.

ಅಧ್ಯಯನ ಪೂರ್ಣಗೊಂಡ ಬಳಿಕ, ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಗೆ ತಮ್ಮ 24ನೇ ವಯಸ್ಸಿನಲ್ಲಿ ಟ್ರಸ್ಟಿ ಆಗಿ ಸೇರಿದ್ದರು.

ವಾರಿಯರ್‌ ಅವರು ಉಸ್ತುವಾರಿ ವಹಿಸಿಕೊಂಡ ಬಳಿಕ, ಮಲಪ್ಪುರಂ ಸಮೀಪದ ಕೊಟ್ಟಕ್ಕಲ್‌ ಆರ್ಯ ವೈದ್ಯ ಶಾಲೆ ಮತ್ತು ಆಯುರ್ವೇದ ವೈದ್ಯಕೀಯ ಕಾಲೇಜು ಖ್ಯಾತಿ ಗಳಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.