ADVERTISEMENT

ಪಶ್ಚಿಮ ಬಂಗಾಳದ ದುರ್ಗಾಪುರ ಸಾಮೂಹಿಕ ಅತ್ಯಾಚಾರ ಆರೋಪ: ಘಟನೆ ಮರುಸೃಷ್ಟಿ

ಪಶ್ಚಿಮ ಬಂಗಾಳದ ದುರ್ಗಾಪುರದ ಖಾಸಗಿ ವೈದ್ಯಕೀಯ ಆಸ್ಪತ್ರೆ ಬಳಿ ನಡೆದಿದ್ದ ಘಟನೆ

ಪಿಟಿಐ
Published 14 ಅಕ್ಟೋಬರ್ 2025, 13:48 IST
Last Updated 14 ಅಕ್ಟೋಬರ್ 2025, 13:48 IST
   

ಕೋಲ್ಕತ್ತ: ದುರ್ಗಾಪುರದ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಐವರು ಬಂಧಿತ ಆರೋಪಿಗಳು ಮತ್ತು ಸಂತ್ರಸ್ತೆಯ ಸ್ನೇಹಿತನನ್ನು ಘಟನೆಯ ಮರುಸೃಷ್ಟಿಗಾಗಿ ಘಟನಾ ಸ್ಥಳಕ್ಕೆ ಮಂಗಳವಾರ ಮಧ್ಯಾಹ್ನ ಕೊಂಡೊಯ್ದರು.

‘ಘಟನಾ ಸ್ಥಳಕ್ಕೆ ಕೊಂಡೊಯ್ಯುವ ಮೊದಲು ಸಂತ್ರಸ್ತೆಯ ಸ್ನೇಹಿತನನ್ನು ಒಂದು ತಾಸು ತನಿಖೆ ನಡೆಸಲಾಯಿತು. ಜೊತೆಗೆ, ಮಂಗಳವಾರ ಬಂಧಿಸಿದ ಇಬ್ಬರು ಆರೋಪಿಗಳನ್ನು ಅವರ ಮನೆಗೆ ಕರೆದುಕೊಂಡು ಹೋಗಿ, ಘಟನೆ ನಡೆದ ದಿನ ಅವರ ಧರಿಸಿದ್ದ ಬಟ್ಟೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು’ ಎಂದು ಪೊಲೀಸರು ತಿಳಿಸಿದರು.

‘ಉಳಿದ ಮೂವರ ಬಟ್ಟೆಗಳನ್ನು ಈಗಾಗಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ. ಐವರ ಮೊಬೈಲ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಈ ಎಲ್ಲವನ್ನೂ ವಿಧಿವಿಜ್ಞಾನ ಸಂಸ್ಥೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಐವರೂ ಆರೋಪಿಗಳನ್ನು ಬುಧವಾರ ಸಂಜೆ ವೇಳೆಗೆ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗುವುದು’ ಎಂದರು.

ADVERTISEMENT

‘ಐವರಲ್ಲಿ ಒಬ್ಬರು, ಸಂತ್ರಸ್ತೆಯು ವ್ಯಾಸಂಗ ಮಾಡುತ್ತಿರುವ ಖಾಸಗಿ ವೈದ್ಯಕೀಯ ಕಾಲೇಜಿನ ಮಾಜಿ ಭದ್ರತಾ ಸಿಬ್ಬಂದಿ. ಇನ್ನೊಬ್ಬರು, ಇದೇ ಪ್ರದೇಶದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತೊಬ್ಬ ಆರೋಪಿಯು ದುರ್ಗಾಪುರದ ಸ್ಥಳೀಯ ಸಂಸ್ಥೆಯಲ್ಲಿ ಗುತ್ತಿಗೆ ನೌಕರ, ಮತ್ತೊಬ್ಬರು ನಿರುದ್ಯೋಗಿ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.