ADVERTISEMENT

ನ.12ರಿಂದ ಡಿ.7 ಪಂಚರಾಜ್ಯ ಮಿನಿಸಮರಕ್ಕೆ ಮುಹೂರ್ತ ಫಿಕ್ಸ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2018, 19:48 IST
Last Updated 6 ಅಕ್ಟೋಬರ್ 2018, 19:48 IST
ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚಿತ್ರ: ಪಿಟಿಐ
ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚಿತ್ರ: ಪಿಟಿಐ   

ನವದೆಹಲಿ: ಕುತೂಹಲ ಕೆರಳಿಸಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಕೇಂದ್ರ ಚುನಾವಣಾ ಆಯೋಗ ಶನಿವಾರ ವೇಳಾಪಟ್ಟಿ ಪ್ರಕಟಿಸಿದೆ.

ಮಧ್ಯ ಪ್ರದೇಶ, ರಾಜಸ್ಥಾನ, ಮೀಜೊರಾಂ, ತೆಲಂಗಾಣ ಮತ್ತು ಛತ್ತೀಸ್‌ಗಡದಲ್ಲಿ ನವೆಂಬರ್‌ 12 ರಿಂದ ಡಿಸೆಂಬರ್‌ 7ರವರೆಗೆ ಚುನಾವಣೆ ನಡೆಯಲಿದ್ದು, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ.

ಈ ಎಲ್ಲ ರಾಜ್ಯಗಳ ಚುನಾವಣಾ ಫಲಿತಾಂಶ ಡಿ.11ರಂದು ಪ್ರಕಟವಾಗಲಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ADVERTISEMENT

2019ರ ಲೋಕಸಭಾ ಚುನಾ ವಣೆಗೂ ಮುನ್ನ ನಡೆಯಲಿರುವ ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ರಾಷ್ಟ್ರ ರಾಜಕಾರಣದ ’ದಿಕ್ಸೂಚಿ’ಯಾದ ಕಾರಣ ಭಾರಿ ಮಹತ್ವ ಪಡೆದುಕೊಂಡಿವೆ.

ಮಧ್ಯ ಪ್ರದೇಶ, ರಾಜಸ್ಥಾನ, ಮೀಜೊರಾಂ ಮತ್ತು ತೆಲಂಗಾಣ ಈ ನಾಲ್ಕು ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿವೆ. ಛತ್ತೀಸ್‌ಗಡದಲ್ಲಿ ಮಾತ್ರ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.

ನಕ್ಸಲರ ಪ್ರಾಬಲ್ಯವಿರುವ ಛತ್ತೀಸ್‌ಗಡದ 18 ಕ್ಷೇತ್ರಗಳಿಗೆ ನ. 12 ರಂದು ಮೊದಲ ಹಂತದ ಚುನಾವಣೆ ನಡೆದರೆ, ಎರಡನೇ ಹಂತದಲ್ಲಿ ಇನ್ನುಳಿದ 72 ಕ್ಷೇತ್ರಗಳಿಗೆ ನ.20ರಂದು ಮತದಾನ ನಡೆಯಲಿದೆ.

ಮಧ್ಯ ಪ್ರದೇಶ ಮತ್ತು ಮಿಜೋ ರಾಂ ನಲ್ಲಿ ನ. 28ರಂದು ಹಾಗೂ ರಾಜಸ್ಥಾನ, ತೆಲಂಗಾಣದಲ್ಲಿ ಡಿ. 7ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ರಾವತ್‌ ತಿಳಿಸಿದ್ದಾರೆ.

ವಿವಾದಕ್ಕೆ ಕಾರಣವಾದ ವಿಳಂಬ

ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟಿಸಲು ವಿಳಂಬ ಮಾಡಿದ ಕೇಂದ್ರ ಚುನಾವಣಾ ಆಯೋಗದ ನಿರ್ಧಾರವು ಟೀಕೆಗೆ ಗುರಿಯಾಗಿದೆ.

ಚುನಾವಣಾ ಆಯೋಗ ಶನಿವಾರ ಮಧ್ಯಾಹ್ನ 12.30ಕ್ಕೆ ವೇಳಾಪಟ್ಟಿ ಪ್ರಕಟಿಸಲು ಸುದ್ದಿಗೋಷ್ಠಿ ನಿಗದಿ ಪಡಿಸಿತ್ತು. ಆದರೆ, ನಿಗದಿತ ಸಮಯಕ್ಕಿಂತ ಎರಡೂವರೆ ತಾಸು ವಿಳಂಬವಾಗಿ ಆಯೋಗ ಚುನಾವಣಾ ದಿನಾಂಕ ಪ್ರಕಟಿಸಿತು. ಇದಕ್ಕೆ ವಿರೋಧ ಪಕ್ಷವಾದ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. ಬಿಜೆಪಿಯ ಬಂಡಾಯ ನಾಯಕ ಯಶವಂತ್‌ ಸಿನ್ಹಾ ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ. ಒಂದು ವೇಳೆ ಆಯೋಗವು ಪೂರ್ವನಿಗದಿಯಂತೆ ವೇಳಾಪಟ್ಟಿ ಪ್ರಕಟಿಸಿದ್ದರೆ ರಾಜಸ್ಥಾನದಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರಭಾಷಣಕ್ಕೆ ನೀತಿ ಸಂಹಿತೆ ಅಡ್ಡಿಯಾಗುತ್ತಿತ್ತು ಎಂದು ಕಾಂಗ್ರೆಸ್‌ ಆರೋಪಿಸಿದೆ.

ಈ ಆರೋಪಗಳನ್ನು ತಳ್ಳಿ ಹಾಕಿರುವ ಚುನಾವಣಾ ಆಯೋಗವುತಾಂತ್ರಿಕ ಸಮಸ್ಯೆಗಳಿಂದ ಪ್ರಕಟಣೆ ವಿಳಂಬವಾಗಿದೆ ಎಂದು ಸಮಜಾಯಿಷಿ ನೀಡಿದೆ.

*ಚುನಾವಣಾ ಆಯೋಗವು ಒಂದು ಸ್ವಾಯತ್ತ ಸಂಸ್ಥೆಯೇ ಎಂಬ ಅನುಮಾನ ಮೂಡುತ್ತಿದೆ. ಆಯೋಗಕ್ಕಿಂತ, ಬಿಜೆಪಿಯೇ ದೊಡ್ಡದಾ

-ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ

* ಅಜ್ಮೀರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಭಾಷಣಕ್ಕಾಗಿ ಆಯೋಗವು ಚುನಾವಣೆ ದಿನಾಂಕ ಘೋಷಣೆಯ ಪತ್ರಿಕಾಗೋಷ್ಠಿಯನ್ನೇ ಮುಂದೂಡಿದ್ದು ದುರದೃಷ್ಟ

-ಯಶವಂತ್ ಸಿನ್ಹಾ, ಬಿಜೆಪಿಯ ಬಂಡಾಯ ನಾಯಕ

*ರಾಜಕಾರಣಿಗಳಿಗೆ ಎಲ್ಲದರಲ್ಲೂ ರಾಜಕಾರಣವೇ ಕಾಣುತ್ತದೆ. ಅದು ಅವರಿಗೆ ಅಭ್ಯಾಸ. ಈ ಬಗ್ಗೆ ನಾನು ಹೇಳುವುದು ಏನೂ ಇಲ್ಲ

-ಒ.ಪಿ.ರಾವತ್, ಮುಖ್ಯ ಚುನಾವಣಾ ಆಯುಕ್ತ

ಸೆಪ್ಟೆಂಬರ್‌ನಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ವಿಧಾನಸಭೆ ವಿಸರ್ಜಿಸುವ ಮೂಲಕ ಅವಧಿಗೂ ಮುನ್ನವೇ ಟಿಎಸ್‌ಆರ್‌ ಚುನಾವಣೆಗೆ ಸಿದ್ಧವಿರುವುದಾಗಿ ಘೋಷಿಸಿದ್ದರು. ತೆಲಂಗಾಣದಲ್ಲಿ ಕಾಂಗ್ರೆಸ್‌ ಮತ್ತು ಟಿಡಿಪಿ ಈಗಾಗಲೇ ಮೈತ್ರಿ ಪ್ರಕಟಿಸಿದೆ. ವಿಧಾನಸಭಾ ಚುನಾವಣೆ ಮುಂಬರುವ ಲೋಕಸಭಾ ಚುನಾವಣೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ.

ಚತ್ತೀಸ್‌ಗಢದಲ್ಲಿ ಅಜಿತ್‌ ಜೋಗಿ ಅವರ ಜನತಾ ಕಾಂಗ್ರೆಸ್‌ನೊಂದಿಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮೈತ್ರಿ ಮಾಡಿಕೊಳ್ಳುವುದಾಗಿ ಇತ್ತೀಚೆಗೆ ಪ್ರಕಟಿಸಿದ್ದಾರೆ. ಸೀಟು ಹಂಚಿಕೆ ಸಂಬಂಧ ಮಾಯಾವತಿ ಕಾಂಗ್ರೆಸ್‌ನೊಂದಿಗೆ ನಡೆಸಿದ್ದ ಮಾತುಕತೆ ವಿಫಲಗೊಂಡಿತ್ತು. ಮಧ್ಯಪ್ರದೇಶದಲ್ಲಿಯೂ ಕಾಂಗ್ರೆಸ್‌ನೊಂದಿಗೆ ನಡೆಸಿದ ಮಾತುಕತೆ ಫಲ ನೀಡಿಲ್ಲ, ಅಲ್ಲಿ ಬಿಎಸ್‌ಪಿಯ 22 ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಯಾರಿ ನಡೆಸಿದ್ದಾರೆ.

ಮಿಜೋರಾಂ ಹೊರತು ಪಡಿಸಿ ಉಳಿದ ಮೂರು ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.