ADVERTISEMENT

ಜಿ.ಸುಧಾಕರನ್‌ ವಿವಾದಿತ ಹೇಳಿಕೆ: ತನಿಖೆ ಆರಂಭಿಸಿದ ಚುನಾವಣಾ ಆಯೋಗ

ಪಿಟಿಐ
Published 15 ಮೇ 2025, 16:22 IST
Last Updated 15 ಮೇ 2025, 16:22 IST
<div class="paragraphs"><p>ಚುನಾವಣಾ ಆಯೋಗ</p></div>

ಚುನಾವಣಾ ಆಯೋಗ

   

ಆಲಪ್ಪುಳ (ಕೇರಳ): ಆಲಪ್ಪುಳ ಲೋಕಸಭಾ ಕ್ಷೇತ್ರಕ್ಕೆ 1989ರಲ್ಲಿ ನಡೆದ ಚುನಾವಣೆಯಲ್ಲಿ ಅಂಚೆ ಮತಪತ್ರ ತೆರೆದು ನೋಡಲಾಗಿತ್ತು ಎಂದು ಕೇರಳದ ಸಿಪಿಎಂ ನಾಯಕ ಜಿ.ಸುಧಾಕರನ್‌ ಹೇಳಿಕೆ ನೀಡಿರುವ ಬೆನ್ನಲ್ಲೇ ಚುನಾವಣಾ ಆಯೋಗ (ಇ.ಸಿ) ಈ ಬಗ್ಗೆ ತನಿಖೆ ಆರಂಭಿಸಿದೆ.  

ಆ ಚುನಾವಣೆಯಲ್ಲಿ ಎದುರಾಳಿ ಪಕ್ಷದ ಅಭ್ಯರ್ಥಿಗೆ ಯಾರೆಲ್ಲ ಮತ ಚಲಾಯಿಸಿದ್ದಾರೆಂಬುದನ್ನು ಕಂಡುಹಿಡಿಯಲು ಅಂಚೆ ಮತಪತ್ರಗಳನ್ನು ತೆರೆದು ಪರೀಕ್ಷಿಸಲಾಗಿತ್ತು ಎಂದು ಮಾಜಿ ಸಚಿವರೂ ಆದ ಜಿ.ಸುಧಾಕರನ್‌ ಎನ್‌ಜಿಒ ಒಕ್ಕೂಟದ ಸಮಾರಂಭದಲ್ಲಿ ಬುಧವಾರ ಹೇಳಿದ್ದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ADVERTISEMENT

ತನಿಖೆಯ ಭಾಗವಾಗಿ, ಇಸಿ ಅಧಿಕಾರಿಗಳು ಗುರುವಾರ ಸುಧಾಕರನ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಹೇಳಿಕೆ ದಾಖಲಿಸಿಕೊಂಡರು. ಮುಂದಿನ ಕ್ರಮಕ್ಕಾಗಿ, ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು.

‘ಕೆಎಸ್‌ಟಿಎ ನಾಯಕ ಕೆ.ವಿ. ದೇವದಾಸ್ ಅವರು ಆಲಪ್ಪುಳದಿಂದ ಸಂಸತ್‌ ಚುನಾವಣೆಗೆ ಸ್ಪರ್ಧಿಸಿದಾಗ, ಜಿಲ್ಲಾ ಸಮಿತಿಯ ಕಚೇರಿಯಲ್ಲಿ ಅಂಚೆ ಮತಪತ್ರಗಳನ್ನು ತೆರೆದು ಪರಿಶೀಲಿಸಲಾಗಿತ್ತು. ಶೇ 15ರಷ್ಟು ಜನರು ವಿರೋಧ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿರುವುದು ಆಗ ಕಂಡುಬಂದಿತ್ತು. ಅಂಚೆ ಮತಗಳನ್ನು ತೆರೆದು ನೋಡಿ, ಮತ್ತೆ ಮುಚ್ಚುವುದು ಕಷ್ಟವಲ್ಲ’ ಎಂದು ಸುಧಾಕರನ್‌ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಆ ಚುನಾವಣೆಯಲ್ಲಿ ಸಿಪಿಎಂನ ದೇವದಾಸ್ ಅವರು ಕಾಂಗ್ರೆಸ್ ನಾಯಕ ವಕ್ಕಂ ಪುರುಷೋತ್ತಮನ್‌ ಅವರ ವಿರುದ್ಧ ಸ್ಪರ್ಧಿಸಿ 18,000 ಮತಗಳಿಂದ ಸೋತಿದ್ದರು ಎಂದು ಸುಧಾಕರ್‌ ಹೇಳಿದ್ದಾರೆ.

‘ಈ ರೀತಿ ಹೇಳಿರುವುದಕ್ಕೆ ನನ್ನ ಮೇಲೆ ಪ್ರಕರಣ ದಾಖಲಾದರೂ ನಾನು ಯೋಚಿಸುವುದಿಲ್ಲ. ಎನ್‌ಜಿಒ ಒಕ್ಕೂಟದ ಎಲ್ಲ ಸದಸ್ಯರು ಎದುರಾಳಿ ಅಭ್ಯರ್ಥಿಗೆ ಮತ ಹಾಕಬಾರದು. ಆದರೆ, ಮತಗಳನ್ನು ಮಾರಿಕೊಳ್ಳುವವರು ತಾವು ಯಾರಿಗೆ ಮತ ಹಾಕಿದ್ದೇವೆಂಬುದು ಗೊತ್ತಾಗದು ಎಂದು ಭಾವಿಸಬಾರದು’ ಎಂದು ಸುಧಾಕರನ್ ಹೇಳಿರುವ ದೃಶ್ಯದ ತುಣುಕು ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.