ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಇವಿಎಂಗಳಲ್ಲಿ ಅಳವಡಿಸಲಾಗಿರುವ ಮೈಕ್ರೋ ಕಂಟ್ರೋಲರ್ ಚಿಪ್‌ಗಳಲ್ಲಿ ಅಕ್ರಮವಾಗಿ ತಿದ್ದುಪಡಿ ಮಾಡಲಾಗಿದೆಯೇ ಅಥವಾ ಮಾರ್ಪಾಡು ಮಾಡಲಾಗಿದೆಯೇ ಎಂಬುದರ ಪರಿಶೀಲನೆಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಸೇರಿದಂತೆ ಇತರ ಅಭ್ಯರ್ಥಿಗಳಿಂದ ಚುನಾವಣಾ ಆಯೋಗಕ್ಕೆ ಎಂಟು ಅರ್ಜಿಗಳು ಸಲ್ಲಿಕೆಯಾಗಿವೆ.
ವಿದ್ಯುನ್ಮಾನ ಮತಯಂತ್ರಗಳ ಬಗೆಗಿನ ಅನುಮಾನವನ್ನು ‘ಆಧಾರರಹಿತ’ ಎಂದು ಕರೆದಿದ್ದ ಸುಪ್ರೀಂ ಕೋರ್ಟ್, ಏ. 26ರಂದು ಮತಪತ್ರ ಆಧಾರಿತ ಚುನಾವಣೆಗೆ ಮರಳುವ ಬೇಡಿಕೆಯುಳ್ಳ ಅರ್ಜಿಯನ್ನು ತಿರಸ್ಕರಿಸಿತ್ತು.
ಆದರೆ, ಇದೇ ಸಮಯದಲ್ಲಿ ಚುನಾವಣಾ ಫಲಿತಾಂಶದಲ್ಲಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದ ಪರಾಜಿತ ಅಭ್ಯರ್ಥಿಗಳು, ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶೇ ಐದರಷ್ಟು ಇವಿಎಂಗಳಲ್ಲಿನ ಚಿಪ್‌ಗಳ ಪರಿಶೀಲನೆಗಾಗಿ ಚುನಾವಣಾ ಆಯೋಗಕ್ಕೆ ನಿಗದಿತ ಶುಲ್ಕವನ್ನು ಪಾವತಿಸಿ, ಲಿಖಿತ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು.
ಮಹಾರಾಷ್ಟ್ರದ ಅಹಮದ್‌ನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಜಯ್ ವಿಖೆ ಪಾಟೀಲ್ ಅವರು 40 ಮತಗಟ್ಟೆಗಳಲ್ಲಿನ ಇವಿಎಂಗಳನ್ನು ಪರಿಶೀಲಿಸುವಂತೆ ಕೋರಿದ್ದಾರೆ. ವೈಎಸ್‌ಆರ್‌ಸಿಪಿ ಮತ್ತು ಡಿಎಂಡಿಕೆ ಅಭ್ಯರ್ಥಿಗಳು ಸಹ ಪರಿಶೀಲನೆಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಆಂಧ್ರಪ್ರದೇಶ ಹಾಗೂ ಒಡಿಶಾದಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು, ವೈಎಸ್‌ಆರ್‌ಸಿಪಿ ಮತ್ತು ಬಿಜೆಡಿಯ ಅಭ್ಯರ್ಥಿಗಳು ಇವಿಎಂ ಪರಿಶೀಲನೆಗೆ ಅರ್ಜಿ ಹಾಕಿದ್ದಾರೆ.
ಚುನಾವಣಾ ಆಯೋಗವು ಜೂನ್ 1ರಂದು ಹೊರಡಿಸಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್‌ಒಪಿ) ಪ್ರಕಾರ, ಎರಡು ಅಥವಾ ಮೂರನೇ ಸ್ಥಾನದಲ್ಲಿರುವ ಪರಾಜಿತ ಅಭ್ಯರ್ಥಿಗಳು ಇವಿಎಂ ಪರಿಶೀಲನೆಯನ್ನು ಬಯಸುವುದಾದರೆ, ಪ್ರತಿ ಇವಿಎಂ ಸೆಟ್‌ಗೆ ₹47,200 ಪಾವತಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.