ADVERTISEMENT

ಬ್ಯಾಂಕ್‌ಗಳ ಮೂಲಕ ಮತದಾರರ ಜಾಗೃತಿ

ಅಂಚೆ ಕಚೇರಿ, ಇಂಡಿಯನ್‌ ಬ್ಯಾಂಕ್ಸ್‌ ಅಸೋಸಿಯೇಷನ್‌ ಜೊತೆ ಆಯೋಗದ ಒಡಂಬಡಿಕೆ

ಪಿಟಿಐ
Published 26 ಫೆಬ್ರುವರಿ 2024, 14:35 IST
Last Updated 26 ಫೆಬ್ರುವರಿ 2024, 14:35 IST
ಮತದಾನ
ಮತದಾನ   

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನದ ಶೇಕಡವಾರು ಪ್ರಮಾಣವನ್ನು ಹೆಚ್ಚಿಸಲಿಕ್ಕಾಗಿ ಚುನಾವಣಾ ಆಯೋಗವು ಬ್ಯಾಂಕ್‌ಗಳು ಹಾಗೂ ಅಂಚೆಕಚೇರಿಗಳನ್ನು ಸಂಪರ್ಕ ಸೇತುವೆಯಾಗಿ ಬಳಸಿಕೊಳ್ಳಲಿದೆ.

ಹಿಂದಿನ ಚುನಾವಣೆಗಳಲ್ಲಿ ಮತ ಚಲಾಯಿಸಲು ನೋಂದಾಯಿತ ಮತದಾರರಲ್ಲಿ ಅನೇಕರು ಮತಗಟ್ಟೆಗಳಿಗೆ ಬಾರದೆ ಉಳಿದಿದ್ದರಿಂದ, ನಗರ ಪ್ರದೇಶ ಹಾಗೂ ಯುವಕರಲ್ಲಿನ ನಿರಾಸಕ್ತಿಯ ಬಗ್ಗೆ ಆಯೋಗವು ಕಳವಳ ವ್ಯಕ್ತಪಡಿಸಿದೆ.

91 ಕೋಟಿ ಮತದಾರರ ಪೈಕಿ 30 ಕೋಟಿ ಮತದಾರರು ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿರಲಿಲ್ಲ.

ADVERTISEMENT

ಲೋಕಸಭಾ ಚುನಾವಣೆಗೂ ಮುನ್ನವೇ ಮತದಾರರಲ್ಲಿ ಜಾಗೃತಿ ಮೂಡಿಸಲಿಕ್ಕಾಗಿ ಚುನಾವಣಾ ಆಯೋಗವು ಸೋಮವಾರ ಎರಡು ಪ್ರಮುಖ ಸಂಸ್ಥೆಗಳಾದ ಇಂಡಿಯನ್‌ ಬ್ಯಾಂಕ್ಸ್‌ ಅಸೋಸಿಯೇಷನ್‌ (ಐಬಿಎ) ಮತ್ತು ಅಂಚೆ ಇಲಾಖೆಯೊಂದಿಗೆ (ಡಿಒಪಿ) ಒಡಂಬಡಿಕೆಗೆ ಸಹಿ ಹಾಕಿದೆ. ಇದು ದೇಶದಾದ್ಯಂತ ಚುನಾವಣಾ ಜಾಗೃತಿಯನ್ನು ಹೆಚ್ಚಿಸುವ ಪ್ರಯತ್ನಗಳ ಮುಂದುವರಿಕೆಯಾಗಿದೆ ಎಂದು ತಿಳಿಸಿದೆ.

ಬ್ಯಾಂಕ್‌ಗಳು ಹಾಗೂ ಅಂಚೆ ಕಚೇರಿಗಳು ತಮ್ಮೊಡನೆ ವ್ಯವಹರಿಸುವ ಗ್ರಾಹಕರಲ್ಲಿ ಮತದಾನದ ಜಾಗೃತಿ ಮೂಡಿಸಲಿವೆ. ಇದಕ್ಕಾಗಿ ಪರಿಣಾಮಕಾರಿ ಸಂದೇಶಗಳನ್ನು ಪ್ರಕಟಿಸಲಿವೆ. ಪ್ರಮುಖ ಸ್ಥಳಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲಿವೆ. ಅಸಂಖ್ಯಾತ ಜನರು ಈ ಎರಡೂ ಸಂಸ್ಥೆಗಳೊಂದಿಗೆ ದೈನಂದಿನ ವಹಿವಾಟು ಹೊಂದಿದ್ದಾರೆ.

ಚುನಾವಣಾ ಸಾಕ್ಷರತೆಯನ್ನು ಶಾಲೆಗಳು ಮತ್ತು ಕಾಲೇಜುಗಳ ಶೈಕ್ಷಣಿಕ ಪಠ್ಯಕ್ರಮದಲ್ಲಿ ಸಂಯೋಜಿಸಲು ಆಯೋಗವು ಈಚೆಗಷ್ಟೇ ಶಿಕ್ಷಣ ಸಚಿವಾಲಯದೊಂದಿಗೂ ಒಡಂಬಡಿಕೆ ಮಾಡಿಕೊಂಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.