ಚುನಾವಣಾ ಆಯೋಗ
ನವದೆಹಲಿ: ‘ಮುಂದಿನ ವರ್ಷ ಮೇ ಮತ್ತು ಜೂನ್ ಮಧ್ಯೆ ನಡೆಯಲಿರುವ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಚುನಾವಣೆಗೂ ಮುಂಚಿತವಾಗಿ ಈ ಐದು ರಾಜ್ಯಗಳ ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸುತ್ತೇವೆ’ ಎಂದು ಕೇಂದ್ರ ಚುನಾವಣಾ ಆಯೋಗ (ಸಿಇಸಿ) ಬುಧವಾರ ಹೇಳಿದೆ.
‘ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ಚುನಾವಣೆಯ ಬಳಿಕ ಈ ಕಾರ್ಯ ಆರಂಭಿಸುತ್ತೇವೆ. ಆಯೋಗದ ಬೂತ್ ಮಟ್ಟದ ಸಿಬ್ಬಂದಿಯು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಮತದಾರರ ಪಟ್ಟಿಯು ವಿಶ್ವಾಸಾರ್ಹವಾಗಿ ಇರುವಂತೆ ನೋಡಿಕೊಳ್ಳುವ ಸಾಂವಿಧಾನಿಕ ಹೊಣೆಗಾರಿಕೆ ನಮ್ಮ ಮೇಲಿದೆ. ಆದ್ದರಿಂದ ಸಮಗ್ರ ಪರಿಶೀಲನೆಗೆ ಮುಂದಾಗಿದ್ದೇವೆ’ ಎಂದಿದೆ.
‘ಬಿಹಾರದಲ್ಲಿ ಚುನಾವಣೆ ಇರುವುದರಿಂದ ಈ ರಾಜ್ಯದ ಮತದಾರರ ಪಟ್ಟಿಯನ್ನು ತಕ್ಷಣವೇ ಸಮಗ್ರವಾಗಿ ಪರಿಶೀಲನೆ ಮಾಡುತ್ತೇವೆ’ ಎಂದು ಆಯೋಗ ಹೇಳಿದೆ. 2003ರಲ್ಲಿ ಕೊನೆಯ ಬಾರಿಗೆ ಬಿಹಾರದಲ್ಲಿ ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲನೆಗೆ ಒಳಪಡಿಸಲಾಗಿತ್ತು.
‘ಅಕ್ರಮ ವಲಸಿಗರು ಮತದಾರರ ಪಟ್ಟಿಯಲ್ಲಿ ಸೇರಿಕೊಳ್ಳದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಆಯೋಗ ಹೇಳಿದೆ. ಬಿಜೆಪಿಗೆ ಸಹಕಾರ ನೀಡಲು ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ಹೊತ್ತಿನಲ್ಲಿಯೇ ಆಯೋಗವು ಈ ನಿರ್ಧಾರ ಕೈಗೊಂಡಿದೆ.
ವಾರದಲ್ಲಿ ಮಾಹಿತಿ ನೀಡಿ: ‘ಮಹಾರಾಷ್ಟ್ರ ಹಾಗೂ ಹರಿಯಾಣದ ಮತದಾರರ ಪಟ್ಟಿ ಮತ್ತು ಮತದಾನದ ದಿನದ ವಿಡಿಯೊ ದೃಶ್ಯಾವಳಿಗಳನ್ನು ಒಂದು ವಾರದ ಒಳಗೆ ನೀಡಿ. ಮತದಾರರ ಪಟ್ಟಿಯ ಮಾಹಿತಿಯು ಕಂಪ್ಯೂಟರ್ ಸ್ವಯಂ ಚಾಲಿತವಾಗಿ ಪರಿಶೀಲಿಸಬಹುದಾದ ಡಿಜಿಟಲ್ ಸ್ವರೂಪದಲ್ಲಿ ಇರಲಿ’ ಎಂದು ಕೇಂದ್ರ ಚುನಾವಣಾ ಆಯೋಗವನ್ನು ಕಾಂಗ್ರೆಸ್ ಆಗ್ರಹಿಸಿದೆ.
‘ಪ್ರಮಾಣ ಪತ್ರ ನೀಡಿ’
ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳ್ಳುವವರು ಮತ್ತು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋದವರು ತಮ್ಮ ಹುಟ್ಟಿದ ದಿನಾಂಕ ಇರುವ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಆಯೋಗ ಹೇಳಿದೆ. ‘1987ರ ಜುಲೈ 1 ಮತ್ತು 2004ರ ಡಿಸೆಂಬರ್ 2ರ ಮಧ್ಯೆ ಜನಿಸಿರುವವರು ತಮ್ಮ ಹುಟ್ಟಿದ ದಿನಾಂಕ ಮತ್ತು ಸ್ಥಳ ನಮೂದಾಗಿರುವ ದಾಖಲೆಯ ಸಮೇತ ಪ್ರಮಾಣ ಪತ್ರವನ್ನು ನೀಡಬೇಕು’ ಎಂದಿದೆ.
ಯಾಕಾಗಿ ಪರಿಶೀಲನೆ?:
ನಗರೀಕರಣ, ನಿರಂತರ ವಲಸೆ, ಹೊಸ ಮತದಾರರ ಸಂಖ್ಯೆಯಲ್ಲಿ ಹೆಚ್ಚಳ, ಮೃತಪಟ್ಟ ಮತದಾರರ ಮಾಹಿತಿಯನ್ನು ಆಯೋಗಕ್ಕೆ ನೀಡದೇ ಇರುವುದು,ಬೇರೆ ರಾಜ್ಯದ ಮತದಾರರ ಹೆಸರು ಇನ್ನೊಂದು ರಾಜ್ಯದ ಮತದಾರರ ಪಟ್ಟಿಯಲ್ಲಿ ಇರುವುದು– ಈ ಎಲ್ಲ ಕಾರಣಗಳಿಂದಾಗಿ ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸಬೇಕಾಗಿದೆ ಎಂದು ಆಯೋಗ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.