ADVERTISEMENT

ದೆಹಲಿ ಅಬಕಾರಿ ಹಗರಣ: ಉದ್ಯಮಿ ಅಮಿತ್‌ ಅರೋರಾ ಬಂಧಿಸಿದ ಇ.ಡಿ

ಪಿಟಿಐ
Published 30 ನವೆಂಬರ್ 2022, 11:23 IST
Last Updated 30 ನವೆಂಬರ್ 2022, 11:23 IST
ಇ.ಡಿ ಅಧಿಕಾರಿಗಳು ಉದ್ಯಮಿ ಅಮಿತ್‌ ಅರೋರಾ ಅವರನ್ನು ನವದೆಹಲಿಯ ರೌಸ್‌ ಅವೆನ್ಯೂ ನ್ಯಾಯಾಲಯಕ್ಕೆ ಕರೆತಂದ ದೃಶ್ಯ –ಪಿಟಿಐ ಚಿತ್ರ
ಇ.ಡಿ ಅಧಿಕಾರಿಗಳು ಉದ್ಯಮಿ ಅಮಿತ್‌ ಅರೋರಾ ಅವರನ್ನು ನವದೆಹಲಿಯ ರೌಸ್‌ ಅವೆನ್ಯೂ ನ್ಯಾಯಾಲಯಕ್ಕೆ ಕರೆತಂದ ದೃಶ್ಯ –ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ‘ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಉದ್ಯಮಿ ಅಮಿತ್‌ ಅರೋರಾ ಅವರನ್ನು ಬಂಧಿಸಿದ್ದಾರೆ’ ಎಂದು ಮೂಲಗಳು ಬುಧವಾರ ತಿಳಿಸಿವೆ.

ಅರೋರಾ ಅವರು ಗುರುಗ್ರಾಮದಲ್ಲಿರುವ ಬಡ್ಡಿ ರೀಟೇಲ್‌ ಪ್ರೈವೇಟ್ ಲಿಮಿಟೆಡ್‌ ಕಂಪನಿಯ ನಿರ್ದೇಶಕರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಈವರೆಗೆ ಆರು ಮಂದಿಯನ್ನು ಬಂಧಿಸಿದಂತಾಗಿದೆ.

‘ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್‌ ಸೆಕ್ಷನ್‌ಗಳ ಅಡಿಯಲ್ಲಿ ಅರೋರಾ ಅವರನ್ನು ಮಂಗಳವಾರ ರಾತ್ರಿಯೇ ಬಂಧಿಸಲಾಗಿದೆ. ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಅಧಿಕಾರಿಗಳು ಬಳಿಕ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ’ ಎಂದು ಮೂಲಗಳು ಹೇಳಿವೆ.

ADVERTISEMENT

ಅಮಿತ್‌ ಅರೋರಾ ಹಾಗೂಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ದಿನೇಶ್‌ ಅರೋರಾ ಮತ್ತು ಅರ್ಜುನ್‌ ಪಾಂಡೆ ಅವರು ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರ ಆಪ್ತರಾಗಿದ್ದಾರೆ. ಇವರು ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು ಎಂದು ಸಿಬಿಐ ಹೋದ ವಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದ ತನ್ನ ಮೊದಲ ದೋಷಾರೋಪ ಪಟ್ಟಿಯಲ್ಲಿ ತಿಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಕೂಡ ನ್ಯಾಯಾಲಯಕ್ಕೆ ಹೋದ ವಾರ ಮೊದಲ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.