ADVERTISEMENT

ಮಹದೇವ್‌ ಆ್ಯಪ್‌ ಪ್ರಕರಣ: ಇ.ಡಿಯಿಂದ ಮತ್ತೊಂದು ಆರೋಪಪಟ್ಟಿ ಸಲ್ಲಿಕೆ

ಪಿಟಿಐ
Published 4 ಜನವರಿ 2024, 16:02 IST
Last Updated 4 ಜನವರಿ 2024, 16:02 IST
ಇ.ಡಿ
ಇ.ಡಿ   

ನವದೆಹಲಿ/ರಾಯಪುರ : ಮಹದೇವ್‌ ಆ್ಯಪ್‌ ಮೂಲಕ ಕಾನೂನುಬಾಹಿರವಾಗಿ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪದ ಸಂಬಂಧ ಜಾರಿ ನಿರ್ದೇಶನಾಲಯವು (ಇ.ಡಿ) ವಿಶೇಷ ಕೋರ್ಟ್‌ನಲ್ಲಿ ಹೊಸದಾಗಿ ಆರೋಪಪಟ್ಟಿ ಸಲ್ಲಿಸಿದೆ.

‘ಇದರ ವಿವರಗಳನ್ನು ಯುಎಐ ಆಡಳಿತಕ್ಕೂ ಸಲ್ಲಿಸಿ, ಆ್ಯಪ್‌ನ ಇಬ್ಬರು ಮುಖ್ಯ ಪ್ರವರ್ತಕರಾದ ರವಿ ಉಪ್ಪಲ್‌, ಸೌರಭ್‌ ಚಂದ್ರಕರ್‌ರನ್ನು ಗಡೀಪಾರು ಮಾಡಬೇಕು ಅಥವಾ ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಕೋರಲಾಗುವುದು’ ಎಂದು ಇ.ಡಿ ಮೂಲಗಳು ತಿಳಿಸಿವೆ.

ಇ.ಡಿ ಕೋರಿಕೆ ಪರಿಗಣಿಸಿ ಇಂಟರ್‌ಪೋಲ್‌ ನೀಡಿದ್ದ ರೆಡ್‌ ನೋಟಿಸ್ ಆಧರಿಸಿ ಇಬ್ಬರನ್ನು ದುಬೈನಲ್ಲಿ ಇತ್ತೀಚೆಗೆ ಬಂಧಿಸಲಾಗಿದೆ. ತನಿಖಾ ಸಂಸ್ಥೆ ಈಗಾಗಲೇ ಮೊದಲ ಆರೋಪಪಟ್ಟಿಯ ವಿವರಗಳನ್ನು ನೀಡಿತ್ತು. ಅದರ ಆಧಾರದಲ್ಲಿ ಜಾಮೀನುರಹಿತ ವಾರಂಟ್‌ ಜಾರಿಯಾಗಿತ್ತು.

ADVERTISEMENT

ಕ್ಯಾಷ್ ಕೊರಿಯರ್‌ ಅಸೀಂ ದಾಸ್‌ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಜನವರಿ 1ರಂದು 1800 ಪುಟಗಳ ಎರಡನೇ ಆರೋಪಪಟ್ಟಿ ದಾಖಲಾಗಿದೆ.ಪೊಲೀಸ್‌ ಕಾನ್‌ಸ್ಟೆಬಲ್‌ ಭೀಮ್‌ ಸಿಂಗ್ ಯಾದವ್, ಆ್ಯಪ್‌ನ ಎಕ್ಸಿಕ್ಯೂಟಿವ್‌ ಶುಭಂ ಸೋನಿ ಇತರ ಆರೋಪಿಗಳು.

ಎರಡನೇ ಆರೋಪಪಟ್ಟಿಯನ್ನು ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯ (ಪಿಎಂಎಲ್‌ಎ) ವಿಶೇಷ ಕೋರ್ಟ್, ಜೂನ್‌ 10ರಂದು ನಡೆಯುವ ವಿಚಾರಣೆಯಲ್ಲಿ ಪರಿಗಣಿಸುವ ಸಂಭವವಿದೆ ಎಂದು ಇ.ಡಿ ಪರ ವಕೀಲ ಸೌರಭ್‌ ಪಾಂಡೆ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.