ADVERTISEMENT

ಜೆಕೆಸಿಎ ಹಗರಣ: ಫಾರೂಕ್ ಅಬ್ದುಲ್ಲಾರನ್ನು ಪ್ರಶ್ನಿಸಿದ ಇಡಿ

ಪಿಟಿಐ
Published 19 ಅಕ್ಟೋಬರ್ 2020, 8:17 IST
Last Updated 19 ಅಕ್ಟೋಬರ್ 2020, 8:17 IST
   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್‌ ಅಸೋಸಿಯೇಷನ್‌ನಲ್ಲಿ(ಜೆಕೆಸಿಎ) ನಡೆದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯಅಕ್ರಮ ಹಣ ವರ್ಗಾವಣೆ ಕುರಿತು ನಡೆಸುತ್ತಿದ್ದ ತನಿಖೆಯಡಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಪ್ರಶ್ನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಹೇಳಿಕೆ ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜೆಕೆಸಿಎ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಸಲೀಮ್ ಖಾನ್‌ ಮತ್ತು ಮಾಜಿ ಖಜಾಂಚಿ ಅಹಸಾನ್ ಅಹ್ಮದ್‌ ಮಿರ್ಜಾ ಸೇರಿದಂತೆ ಕೆಲವು ಪದಾಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿದೆ.

ADVERTISEMENT

2002 ರಿಂದ 2011ರ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವುದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಜೆಕೆಸಿಎಗೆ ನೀಡಿದ ಅನುದಾನದಲ್ಲಿ ₹43.69 ಕೋಟಿ ಹಣ ದುರುಪಯೋಗವಾಗಿದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಜೆಕೆಸಿಎ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಮಾಜಿ ಖಜಾಂಚಿ ಮತ್ತಿತರ ಪದಾಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.