ADVERTISEMENT

ಮಾದಕ ವಸ್ತುಗಳ ಹಣಕಾಸು ಜಾಲ: ಮಾಜಿ ಸಚಿವ ಬಾಬು ಸಿಂಗ್‌ ಆಸ್ತಿಗಳ ಮೇಲೆ ಇ.ಡಿ ದಾಳಿ

ಪಿಟಿಐ
Published 6 ನವೆಂಬರ್ 2025, 14:01 IST
Last Updated 6 ನವೆಂಬರ್ 2025, 14:01 IST
ಜಾರಿ ನಿರ್ದೇಶನಾಲಯ 
ಜಾರಿ ನಿರ್ದೇಶನಾಲಯ    

ಶ್ರೀನಗರ: ಮಾದಕ ವಸ್ತುಗಳ ಹಣಕಾಸು ಜಾಲಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಮಾಜಿ ಸಚಿವ ಜತೀಂದರ್‌ ಸಿಂಗ್‌ ಅಲಿಯಾಸ್‌ ಬಾಬು ಸಿಂಗ್‌ ಅವರ ಮನೆ ಸೇರಿದಂತೆ ಹಲವು ಸ್ಥಳಗಳ ಮೇಲೆ  ಜಾರಿ ನಿರ್ದೇಶನಾಲಯವು (ಇ.ಡಿ)ಯು ಗುರುವಾರ ಹೊಸತಾಗಿ ದಾಳಿ ನಡೆಸಿದೆ.

ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ ಹವಾಲಾ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇ.ಡಿಯು ಈಗಾಗಲೇ ತನಿಖೆ ನಡೆಸುತ್ತಿದ್ದು, ಶ್ರೀನಗರದ ಆರು  ಹಾಗೂ ಜಮ್ಮುವಿನ ಎರಡು ಸ್ಥಳಗಳಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಮಾಜಿ ಸಚಿವ ಬಾಬು ಸಿಂಗ್‌ ಅವರಿಗೆ ತಲುಪಿಸಲು ಶ್ರೀನಗರದಿಂದ ಜಮ್ಮುವಿಗೆ ₹6.9 ಲಕ್ಷವನ್ನು ಹವಾಲಾ ಮೂಲಕ ಸಾಗಿಸುತ್ತಿದ್ದ ಆರೋಪದ ಮೇಲೆ ಮೊಹಮ್ಮದ್‌ ಷರೀಫ್‌ ಶಾ ಅವರನ್ನು 2022ರಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗ್‌, ಶಾ ಹಾಗೂ ಮತ್ತೊಬ್ಬ ಆರೋಪಿ ಮೊಹಮಮದ್‌ ಹುಸೇನ್‌ ಖತೀಬ್‌ ವಿರುದ್ಧ ಸೆಪ್ಟೆಂಬರ್‌ ತಿಂಗಳಲ್ಲಿ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ಹಾಗೂ ಜಮ್ಮು ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಸಿಂಗ್‌ ಜಾಮೀನು ಪಡೆದುಕೊಂಡಿದ್ದಾರೆ.

ADVERTISEMENT

ಎಸ್‌ಐಎ ಪ್ರಕಾರ, ‘ಸಿಂಗ್‌ ಅವರ ‘ದಿ ನೇಚರ್‌ ಮ್ಯಾನ್‌ಕೈಂಡ್‌ ಫ್ರೆಂಡ್ಲಿ ಗ್ಲೋಬಲ್‌ ಪಕ್ಷ’ದ ಮೂಲಕ ದೇಶ ವಿರೋಧಿ ಚಟುವಟಿಕೆಗಳಿಗೆ ಹವಾಲಾ ಹಣ ಬಳಸಲಾಗುತ್ತಿತ್ತು. ಅಲ್ಲದೇ, ಬಾಬು ಸಿಂಗ್‌ ನಿಷೇಧಿತ ಹಿಜ್ಬುಲ್‌ ಮುಜಾಹಿದ್ದೀನ್‌ ಹಾಗೂ ಪ್ರತ್ಯೇಕತಾವಾದಿ ಸಂಘಟನೆ ಜಮ್ಮು ಮತ್ತು ಕಾಶ್ಮೀರ್‌ ಲಿಬರೇಷನ್‌ ಫ್ರಂಟ್‌ (ಜೆಕೆಎಲ್‌ಎಫ್‌) ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು’ ಎಂದು ತಿಳಿಸಿದೆ.

‘ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ದೇಶ ರಚಿಸುವ ಉದ್ದೇಶ ಹೊಂದಿದ್ದ ಅವರು, ಜೆಕೆಎಲ್‌ಎಫ್‌ ಜೊತೆಗೆ ಆನ್‌ಲೈನ್‌ ಮೂಲಕ ಸಂವಾದ ನಡೆಸಿದ್ದರು. ಅವರ ಮೊಬೈಲ್‌ ಅನ್ನು ವಶಕ್ಕೆ ಪಡೆದು ತನಿಖೆ ನಡೆಸಿದ ವೇಳೆ ದೇಶ ವಿರೋಧಿ ಬರಹಗಳು ಸಿಕ್ಕಿದ್ದವು’ ಎಂದು ಎಸ್‌ಐಎ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.