
ನವದೆಹಲಿ: ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ತಂಡ ತಮ್ಮ ಮನೆ ಮೇಲೆ ನಡೆಸಿದ ದಾಳಿಯನ್ನು ‘ಕಿರುಕುಳ ಮತ್ತು ಪಿತೂರಿ’ಯ ಭಾಗವೆಂದು ದೆಹಲಿ ಸರ್ಕಾರದ ಸಚಿವ ರಾಜ್ ಕುಮಾರ್ ಆನಂದ್ ಆರೋಪಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಸಚಿವ ಆನಂದ್ ಮತ್ತು ಇತರರಿಗೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ಗುರುವಾರ ಬೆಳಿಗ್ಗೆ 7.30ರ ಸುಮಾರಿಗೆ ಏಕ ಕಾಲಕ್ಕೆ ಶೋಧ ಆರಂಭಿಸಿದ ಇ.ಡಿ ಅಧಿಕಾರಿಗಳು, ಶುಕ್ರವಾರ ನಸುಕಿನ 5 ಗಂಟೆ ಸುಮಾರಿಗೆ ಕೊನೆಗೊಳಿಸಿದರು. ಎಎಪಿ ನಾಯಕನ ಮನೆ ಮತ್ತು ಸಂಬಂಧಿಸಿದ ಸ್ಥಳಗಳಲ್ಲಿ 23 ತಾಸುಗಳ ನಿರಂತರ ಶೋಧ ನಡೆಯಿತು.
‘ಇದು ಎಎಪಿ ನಾಯಕರಿಗೆ ಕಿರುಕುಳ ನೀಡುವ ಸಂಚಿನ ಭಾಗವಾಗಿದೆ. ಗುರುವಾರ ಬೆಳಿಗ್ಗೆಯಿಂದ ನಮಗೆ ಕಿರುಕುಳ ನೀಡಲಾಗುತ್ತಿದೆ’ ಎಂದು ಸಚಿವ ಆನಂದ್ ಅವರು, ತಮ್ಮ ನಿವಾಸದಿಂದ ಇ.ಡಿ ಅಧಿಕಾರಿಗಳು ತೆರಳಿದ ನಂತರ ಸುದ್ದಿಗಾರರಿಗೆ ತಿಳಿಸಿದರು.
ಸುಮಾರು ₹7 ಕೋಟಿ ಅಬಕಾರಿ ಸುಂಕ ವಂಚಿಸಿರುವ ಆರೋಪದ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ ಸಲ್ಲಿಸಿದ ಚಾರ್ಜ್‌ಶೀಟ್ ಆಧರಿಸಿ ಸಚಿವ ಆನಂದ್ ಮತ್ತು ಇತರರ ವಿರುದ್ಧ ಇ.ಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.