ADVERTISEMENT

ಇ.ಡಿ. ಸಮನ್ಸ್: ದೆಹಲಿ ಪೊಲೀಸ್‌ ವರ್ತನೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 19:54 IST
Last Updated 15 ಜೂನ್ 2022, 19:54 IST
ನವದೆಹಲಿಯಲ್ಲಿ ಬುಧವಾರ ಎಐಸಿಸಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು  – ಪಿಟಿಐ ಚಿತ್ರ
ನವದೆಹಲಿಯಲ್ಲಿ ಬುಧವಾರ ಎಐಸಿಸಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು – ಪಿಟಿಐ ಚಿತ್ರ   

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ.) ರಾಹುಲ್‌ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸುವುದನ್ನು ವಿರೋಧಿಸಿ, ಕಾಂಗ್ರೆಸ್‌ ಮೂರನೇ ದಿನವೂ ಪ್ರತಿಭಟನೆಮುಂದುವರಿಸಿತು. ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರು ಮತ್ತು ನಾಯಕರನ್ನು ವಶಕ್ಕೆ ಪಡೆಯಲು ಪೊಲೀಸರು ಪಕ್ಷದ ಕಚೇರಿ ಆವರಣಕ್ಕೆ ನುಗ್ಗಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಯಿತು.

‘ದೆಹಲಿ ಪೊಲೀಸರು ಬಿಜೆಪಿಯ ಖಾಸಗಿ ಪಡೆಯಂತೆ ವರ್ತಿಸಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿ ಪೊಲೀಸರು ಕಾಂಗ್ರೆಸ್‌ ಕಚೇರಿಯ ಗೇಟನ್ನು ಒದ್ದು ಒಳನುಗ್ಗುತ್ತಿರುವ ಮತ್ತು ಪಕ್ಷದ ಕಾರ್ಯಕರ್ತರನ್ನು ಒದೆಯುತ್ತಿರುವ ದೃಶ್ಯಗಳಿರುವ ವಿಡಿಯೊವನ್ನು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ವರದಿಗಾರರನ್ನೂ ಪೊಲೀ
ಸರು ದೂರಕ್ಕೆ ತಳ್ಳುತ್ತಿರುವ ದೃಶ್ಯಗಳೂ ವಿಡಿಯೊಗಳಲ್ಲಿ ದಾಖಲಾಗಿವೆ.

ADVERTISEMENT

‘ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷದ ಕಚೇರಿಗೆ ದೆಹಲಿ ಪೊಲೀಸರು ಬಲವಂತದಿಂದ ಪ್ರವೇಶಿಸಿದ್ದಾರೆ. ಪಕ್ಷದ ಕಚೇರಿಯ ಬಾಗಿಲುಗಳನ್ನು ಒದ್ದು ಒಳನುಗ್ಗುವ ಮೂಲಕ ಪೊಲೀಸರು, ನಮ್ಮ ಹಿರಿಯರು ಹೋರಾಡಿ ರೂಪಿಸಿದ ಪ್ರಜಾಪ್ರಭುತ್ವವನ್ನು ಉರುಳಿಸಿದ್ದಾರೆ. ಬಿಜೆಪಿಯು ಇಂದು ಪ್ರಜಾಪ್ರಭುತ್ವದ ಕೊಲೆ ಮಾಡಿದೆ. ಇದಕ್ಕಿಂತ ಕರಾಳ ಸ್ಥಿತಿ ಮತ್ತೊಂದಿಲ್ಲ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಟ್ವೀಟ್ ಮಾಡಿದ್ದಾರೆ.

ಶುಕ್ರವಾರ ವಿಚಾರಣೆ

ಈ ಪ್ರಕರಣಕ್ಕೆ ಸಂಬಂಧಿಸಿ ಮೂರನೇ ದಿನವಾದ ಬುಧವಾರವೂ ರಾಹುಲ್‌ ಗಾಂಧಿ ಅವರನ್ನು ಇ.ಡಿ. ವಿಚಾರಣೆಗೆ ಒಳಪಡಿಸಿತ್ತು. ಬುಧವಾರ ಬೆಳಿಗ್ಗೆ 11.30ಕ್ಕೆ ವಿಚಾರಣೆಗೆ ಹಾಜರಾದ ರಾಹುಲ್‌ ಸಂಜೆಯವರೆಗೆ ಇ.ಡಿ. ಕಚೇರಿಯಲ್ಲಿ ಇದ್ದರು. ಮೂರು ದಿನವೂ ಸೇರಿ, ಅವರು ಒಟ್ಟು 30 ಗಂಟೆಗೂ ಹೆಚ್ಚು ಹೊತ್ತು ವಿಚಾರಣೆ ಎದುರಿಸಿದ್ದಾರೆ. ಈಗ ಮತ್ತೆ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಇ.ಡಿ. ಸಮನ್ಸ್ ನೀಡಿದೆ.

ಸರ್ಕಾರಕ್ಕೆ ಕಾಂಗ್ರೆಸ್‌ ನೋಟಿಸ್‌

ಇ.ಡಿ. ವಿಚಾರಣೆಯಲ್ಲಿ ರಾಹುಲ್ ಗಾಂಧಿ ಅವರು ಹೇಗೆ ಉತ್ತರ ನೀಡುತ್ತಿದ್ದಾರೆ ಎಂಬುದರ ಬಗ್ಗೆ ಆಯ್ದ ಕೆಲವು ಮಾಧ್ಯಮಗಳಿಗೆ ತಪ್ಪು ಮಾಹಿತಿಯನ್ನು ಸೋರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌, ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದೆ.

ಆಯ್ದ ಮಾಹಿತಿಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವುದನ್ನು ಸರ್ಕಾರ ತಕ್ಷಣವೇ ನಿಲ್ಲಿಸಬೇಕು ಎಂದು ನೋಟಿಸ್‌ನಲ್ಲಿ ಆಗ್ರಹಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಗೃಹ ಸಚಿವ ಅಮಿತ್ ಶಾ ಮತ್ತು ಕಾನೂನು ಸಚಿವ ಕಿರಣ್ ರಿಜಿಜು ಅವರಿಗೆ ನೋಟಿಸ್‌ ನೀಡಲಾಗಿದೆ. ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ವಿವೇಕ್ ತನ್ಖಾ ಅವರು ನೋಟಿಸ್‌ ನೀಡಿದ್ದಾರೆ.ವಿಚಾರಣೆಗೆ ಸಂಬಂಧಿಸಿದಂತೆಮೂರು ಸುದ್ದಿವಾಹಿನಿಗಳು ಪ್ರಸಾರ ಮಾಡಿರುವ ವರದಿಗಳ ಲಿಂಕ್‌ಗಳನ್ನು ನೋಟಿಸ್‌ನಲ್ಲಿ ಲಗತ್ತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.