ADVERTISEMENT

ಬ್ರಿಟನ್‌ನ ವಾದ್ರಾ ಆಸ್ತಿ ಕುರಿತು ಮಾಹಿತಿ ಕೋರಿದ ಇ.ಡಿ

ವಿದೇಶಿ ಸಂಸ್ಥೆ, ಗುಪ್ತಚರ ವಿಭಾಗಗಳಿಂದಲೂ ಮಾಹಿತಿ ಸಂಗ್ರಹ

ಪಿಟಿಐ
Published 7 ಜೂನ್ 2019, 1:14 IST
Last Updated 7 ಜೂನ್ 2019, 1:14 IST
   

ನವದೆಹಲಿ: ರಾಬರ್ಟ್ ವಾದ್ರಾ ವಿರುದ್ಧದ ತನಿಖೆಗೆ ಮತ್ತಷ್ಟು ಚುರುಕು ನೀಡಿರುವ ಜಾರಿ ನಿರ್ದೇಶನಾಲಯ(ಇ.ಡಿ), ಬ್ರಿಟನ್‌ನಲ್ಲಿನ ಆಸ್ತಿ, ವಾದ್ರಾ ನಡೆಸಿದಹಣಕಾಸು ವ್ಯವಹಾರಗಳ ಸಂಪೂರ್ಣ ವಿವರವನ್ನು ನೀಡುವಂತೆ ಅಲ್ಲಿನ ತನಿಖಾ ಸಂಸ್ಥೆಯನ್ನು ಕೇಳಿಕೊಂಡಿದೆ.

ಅಕ್ರಮ ಹಣ ವರ್ಗಾವಣೆ ಮೂಲಕ ವಾದ್ರಾ ಈ ಆಸ್ತಿಗಳನ್ನು ಖರೀದಿಸಿದ್ದಾರೆ ಎಂದು ಇಡಿ ಸಂಶಯ ವ್ಯಕ್ತಪಡಿಸಿದ್ದು, ಇದರ ಜಾಡು ಹಿಡಿದು ಹಲವು ದೇಶಗಳ ಹಣಕಾಸು ಗುಪ್ತಚರ ವಿಭಾಗಗಳಿಂದಲೂ ಮಾಹಿತಿ ಸಂಗ್ರಹಿಸಲಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು, ವಾದ್ರಾ ವಿರುದ್ಧ ಪ್ರಬಲ ಪ್ರಕರಣ ದಾಖಲಿಸಲುಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ)ಇಡಿ ನೀಲಿನಕ್ಷೆ ತಯಾರಿಸಲಾಗುತ್ತಿದೆ ಎಂದಿದ್ದಾರೆ.

ಲಂಡನ್‌ನ ಬ್ರೈನ್‌ಸ್ಟನ್‌ ಸ್ಕ್ವೇರ್‌ನಲ್ಲಿ ₹16.74 ಕೋಟಿ ಮೌಲ್ಯದ ಆಸ್ತಿಯ ಕುರಿತು ಇಡಿ ತನಿಖೆ ನಡೆಸುತ್ತಿದೆ. ಇದರ ಜೊತೆಗೆ ₹44 ಕೋಟಿ ಹಾಗೂ ₹38.78 ಕೋಟಿ ಮೌಲ್ಯದ ಮನೆ ಹೊಂದಿದ್ದು, 6 ಫ್ಲ್ಯಾಟ್‌ಗಳನ್ನು ಹೊಂದಿದ್ದಾರೆ ಎನ್ನುವುದಕ್ಕೆ ಇಡಿ ಬಳಿ ಸಾಕ್ಷ್ಯಗಳಿವೆ ಎಂದು ಮೂಲಗಳು ತಿಳಿಸಿವೆ. ಈ ಆಸ್ತಿ ಖರೀದಿಗೆ ದುಬೈ ಮತ್ತು ಸೈಪ್ರಸ್‌ನಿಂದ ವಾದ್ರಾ ಜತೆ ಸಂಪರ್ಕವಿದ್ದವರುಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂಬುವುದನ್ನು ಸಂಸ್ಥೆ ಪತ್ತೆ ಹಚ್ಚಿದೆ.

ADVERTISEMENT

ಈ ಎಲ್ಲ ವಹಿವಾಟುಗಳ ಹಿಂದೆ ಎನ್‌ಆರ್‌ಐ ಉದ್ಯಮಿಸಿಸಿ ತಂಪಿ ಇರುವ ಸಂಶಯವನ್ನು ಇಡಿ ಹೊಂದಿದ್ದು, ಈತನಿಗೆ ಸಮನ್ಸ್‌ ಜಾರಿಗೊಳಿಸಿದೆ.ಕೇರಳದಲ್ಲಿ ವಿದೇಶಿ ವಿನಿಮಯ ಕಾನೂನು ಉಲ್ಲಂಘಿಸಿ ₹1,000 ಕೋಟಿ ಮೌಲ್ಯದ ಭೂಮಿ ಖರೀದಿಸಿದಕ್ಕಾಗಿತಂಪಿಗೆ ಇಡಿ ಶೋಕಾಸ್‌ ನೋಟಿಸ್‌ ನೀಡಿತ್ತು. ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಮುಖಾಂತರ ತಂಪಿ ವಾದ್ರಾ ಅವರನ್ನು ಭೇಟಿಯಾಗಿದ್ದರು ಎಂದು ಇಡಿ ತಿಳಿಸಿತ್ತು. ಆದರೆ ಎಮರೇಟ್ಸ್‌ ವಿಮಾನದಲ್ಲಿ ವಾದ್ರಾ ಭೇಟಿಯಾಯಿತು ಎಂದು ತಂಪಿ ವಿಚಾರಣೆ ವೇಳೆ ತಿಳಿಸಿದ್ದರು.

ಈ ನಡುವೆ ತನ್ನ ವಿರುದ್ಧದ ಆರೋಪಗಳಿಗೆ ಸಾಮಾಜಿಕ ಜಾಲತಾಣದ ಮುಖಾಂತರ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ವಾದ್ರಾ, ‘ನನ್ನ ವಿರುದ್ಧ ಮಾಡಲಾಗಿರುವ ಆಧಾರರಹಿತ ಆರೋಪಗಳ ವಿರುದ್ಧ ಕಳೆದೊಂದು ದಶಕದಿಂದ ಹೋರಾಡುತ್ತಿದ್ದೇನೆ. ಇಡಿ ಪದೇ ಪದೇ ಸಮನ್ಸ್‌ ನೀಡುತ್ತಿದ್ದು, ಅನವಶ್ಯಕ ನಾಟಕ ಸೃಷ್ಟಿಸುತ್ತಿದೆ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.