ADVERTISEMENT

ಭಾರತದ 'Educate Girls' ಸಂಸ್ಥೆಗೆ ಮ್ಯಾಗ್ಸೆಸೆ ಪ್ರಶಸ್ತಿ

ಶಿಕ್ಷಣದ ಮೂಲಕ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಸಂದ ಗೌರವ

ಪಿಟಿಐ
Published 31 ಆಗಸ್ಟ್ 2025, 11:53 IST
Last Updated 31 ಆಗಸ್ಟ್ 2025, 11:53 IST
Venugopala K.
   Venugopala K.

ಮುಂಬೈ: ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ವಿವಿಧ ರೀತಿಯ ಶೋಷಣೆಯಿಂದ ಅವರನ್ನು ವಿಮೋಚನೆ ಗೊಳಿಸುವಲ್ಲಿ ನಿರತವಾಗಿರುವ ಸ್ವಯಂ ಸೇವಾ ಸಂಸ್ಥೆ ‘ಎಜುಕೇಟ್‌ ಗರ್ಲ್ಸ್’ಗೆ ಈ ಬಾರಿಯ ಪ್ರತಿಷ್ಠಿತ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ.

‘ಎಜುಕೇಟ್‌ ಗರ್ಲ್ಸ್‌’ ಸಂಸ್ಥೆಯು ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆಯಾಗಿರುವ ಭಾರತದ ಮೊದಲ ಸಂಘಟನೆಯಾಗಿದೆ. ಇದೊಂದು ಐತಿಹಾಸಿಕ ಕ್ಷಣ’ ಎಂದು ರೇಮನ್‌ ಮ್ಯಾಗ್ಸೆಸೆ ಅವಾರ್ಡ್ ಫೌಂಡೇಷನ್‌ (ಆರ್‌ಎಂಎಎಫ್‌) ಪ್ರಕಟಣೆಯಲ್ಲಿ ಭಾನುವಾರ ತಿಳಿಸಿದೆ.

‘ದಿ ಫೌಂಡೇಷನ್ ಟು ಎಜುಕೇಟ್ ಗರ್ಲ್ಸ್‌ ಗ್ಲೋಬಲಿ’ ಎಂಬುದು ಸಂಸ್ಥೆಯ ಮೂಲ ಹೆಸರಾಗಿದ್ದು, ಇದು ‘ಎಜುಕೇಟ್‌ ಗರ್ಲ್ಸ್‌’ ಎಂದೇ ಪ್ರಸಿದ್ಧ. ಸಫೀನಾ ಹುಸೇನ್‌ ಅವರು ಸಂಘಟನೆಯನ್ನು 2007ರಲ್ಲಿ ಸ್ಥಾಪಿಸಿದ್ದಾರೆ. 

ADVERTISEMENT

ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ನವೆಂಬರ್ 7ರಂದು ನಡೆಯುವ ಸಮಾರಂಭದಲ್ಲಿ 67ನೇ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿನ ಕಾರ್ಯಕ್ಕಾಗಿ ಮಾಲ್ದೀವ್ಸ್‌ನ ಶಾಹಿನಾ ಅಲಿ ಹಾಗೂ ಫಿಲಿಪ್ಪೀನ್ಸ್‌ನ ಫ್ಲಾವಿಯಾನೊ ಆಂಟೊನಿಯೊ ಎಲ್‌ ವಿಲ್ಲಾನುಯೆವಾ ಅವರಿಗೂ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.

ಐತಿಹಾಸಿಕ ಕ್ಷಣ: ಸಫೀನಾ

‘ಸಂಸ್ಥೆಗೆ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿರುವುದು ಭಾರತದ ಪಾಲಿಗೆ ಐತಿಹಾಸಿಕ ಕ್ಷಣ. ದೇಶದ ಮೂಲೆಯೊಂದರಲ್ಲಿ ಒಬ್ಬ ಬಾಲಕಿಯಿಂದ ಈ ಶಿಕ್ಷಣ ಅಭಿಯಾನ ಆರಂಭಗೊಂಡಿತು. ಜನರೇ ಮುನ್ನಡೆಸುತ್ತಿರುವ ಚಳವಳಿಯೊಂದು ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವುದು ಖುಷಿ ತಂದಿದೆ’ ಎಂದು ‘ಎಜುಕೇಟ್‌ ಗರ್ಲ್ಸ್‌’ನ ಸಂಸ್ಥಾಪಕಿ ಸಫೀನಾ ಹುಸೇನ್‌ ಭಾನುವಾರ ಹೇಳಿದರು.

‘ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಟೀಮ್‌ ಬಾಲಿಕಾ’ದ ಸ್ವಯಂ ಸೇವಕರು, ಪಾಲುದಾರರು, ಬೆಂಬಲ ನೀಡುತ್ತಿರುವವರಿಗೆ ಈ ಪ್ರಶಸ್ತಿಯಿಂದ ಗೌರವ ಸಿಕ್ಕಂತಾಗಿದೆ. ಅಲ್ಲದೇ, ಲಕ್ಷಾಂತರ ಬಾಲಕಿಯರು ತಮ್ಮ ಶಿಕ್ಷಣದ ಹಕ್ಕನ್ನು ಮರಳಿ ಪಡೆದಿರುವುದನ್ನು ಸಹ ಈ ಪ್ರಶಸ್ತಿ ದೃಢೀಕರಿಸುತ್ತದೆ’ ಎಂದರು.

ಮುಂದಿನ ದಶಕದಲ್ಲಿ 1 ಕೋಟಿ ಬಾಲಕಿಯರನ್ನು ತಲುಪುವ ಗುರಿ ಇದೆ. ಉದ್ದೇಶಿತ ಕಾರ್ಯಕ್ರಮವನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳಲಾಗುವುದು.
-ಸಫೀನಾ ಹುಸೇನ್, ‘ಎಜುಕೇಟ್‌ ಗರ್ಲ್ಸ್‌’ ಸಂಸ್ಥಾಪಕಿ
ಶಿಕ್ಷಣವು ಪ್ರತಿಯೊಬ್ಬ ಬಾಲಕಿಯ ಮೂಲಭೂತ ಹಕ್ಕು ಎಂಬುದು ಸಂಸ್ಥೆಯ ನಂಬಿಕೆ. ಹಲವರ ಸಹಕಾರ ದಿಂದ ಪರಿವರ್ತನೆ ಸಾಧ್ಯವಾಗಿದ್ದನ್ನು ಈ ಪ್ರಶಸ್ತಿ ಗುರುತಿಸಿದೆ.
-ಗಾಯತ್ರಿ ನಾಯರ್ ಲೋಬೊ,‘ಎಜುಕೇಟ್‌ ಗರ್ಲ್ಸ್’ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.