ADVERTISEMENT

ದೇಶದ ‘ಮೊದಲ ಸಗಣಿ ಮುಕ್ತ’ ನಗರ?

ಯೋಜನೆ ಜಾರಿಗೆ ಜಾರ್ಖಂಡ್ ಸರ್ಕಾರ ಕ್ರಮ

ಪಿಟಿಐ
Published 2 ಸೆಪ್ಟೆಂಬರ್ 2018, 19:30 IST
Last Updated 2 ಸೆಪ್ಟೆಂಬರ್ 2018, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಜಮ್‌ಷೆಡ್‌ಪುರ: ‘ದೇಶದ ಮೊದಲ ಸಗಣಿ ಮುಕ್ತ ನಗರ’ ಮಾಡುವ ಸಲುವಾಗಿ ಜಮ್‌ಷೆಡ್‌ಪುರದಲ್ಲಿ ಯೋಜನೆಯೊಂದನ್ನು ಜಾರಿಗೊಳಿಸಲು ಜಾರ್ಖಂಡ್‌ ಸರ್ಕಾರ ಮುಂದಾಗಿದೆ.

ಈ ನಿಟ್ಟಿನಲ್ಲಿ ಜಮ್‌ಷೆಡ್‌ಪುರ ಪ್ರಾದೇಶಿಕ ಸಮಿತಿ (ಜೆಎನ್‌ಎಸಿ) ಈಚೆಗೆ ಟೆಂಡರ್ ಕರೆದಿತ್ತು. ಬಿಡ್ಡಿಂಗ್‌ನಲ್ಲಿ ಗೆಲುವು ಸಾಧಿಸಿರುವ ನಗರದ ಎರಡು ಸಂಸ್ಥೆಗಳು ಯೋಜನೆ ಬಗ್ಗೆಒಪ್ಪಂದ ಮಾಡಿಕೊಂಡಿವೆ.

ಇಂತಹ ಯೋಜನೆಭಾರತದಲ್ಲಿಯೇ ಮೊದಲನೆಯದಾಗಿದೆ ಎಂದು ಸಮಿತಿಯ ವಿಶೇಷ ಅಧಿಕಾರಿ ಸಂಜಯ್ ಕುಮಾರ್ ಪಾಂಡೆ
ತಿಳಿಸಿದ್ದಾರೆ.

ADVERTISEMENT

‘ಜಮ್‌ಷೆಡ್‌ಪುರದಲ್ಲಿ 350ಕ್ಕೂ ಹೆಚ್ಚು ಕೊಟ್ಟಿಗೆಗಳಿದ್ದು, ಇವೆಲ್ಲವೂ ಅಕ್ರಮವಾದವು. ಸಗಣಿ ವಿಲೇವಾರಿಗೆ ಈ ಕೊಟ್ಟಿಗೆಗಳಲ್ಲಿ ಯಾವುದೇ ರೀತಿಯ ವ್ಯವಸ್ಥೆ ಇಲ್ಲ. ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಸಗಣಿಯಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು, ಕೊಟ್ಟಿಗೆಗಳು ಹಾಗೂ ಹಸುಗಳ ಮಾಲೀಕರ ವಿರುದ್ಧ ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿದ್ದವು’ ಎಂದು ಪಾಂಡೆ ತಿಳಿಸಿದ್ದಾರೆ.

ಯೋಜನೆ ಏನು?:ಒಪ್ಪಂದ ಮಾಡಿಕೊಂಡಿರುವ ಎರಡೂ ಸಂಸ್ಥೆಗಳು ದಿನನಿತ್ಯದ ಆಧಾರದ ಮೇಲೆ ನಗರದಲ್ಲಿ ಸಗಣಿ ಸಂಗ್ರಹಿಸಿ ಅವುಗಳ ಸೂಕ್ತ ವಿಲೇವಾರಿ ಮಾಡುತ್ತವೆ.

ಮೊದಲಿಗೆ, ನಗರದಲ್ಲಿರುವ ಒಟ್ಟು ಕೊಟ್ಟಿಗೆಗಳು ಹಾಗೂ ಹಸುಗಳನ್ನು ಗುರುತಿಸಲು ಮತ್ತು ಪ್ರತಿದಿನ ಸಂಗ್ರಹಿಸಬೇಕಾದ ಸಗಣಿ ಪ್ರಮಾಣ ಅಂದಾಜಿಸಲು ಸಮೀಕ್ಷೆ ನಡೆಸುವಂತೆಸಂಸ್ಥೆಗಳಿಗೆ ಸೂಚಿಸಲಾಗಿದೆ. ಸೆಪ್ಟೆಂಬರ್ 15ರಿಂದ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಪಾಂಡೆ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.