ನವದೆಹಲಿ: ಮತದಾರರ ಪಟ್ಟಿಯಿಂದ ಹೆಸರು ಅಳಿಸಿ ಹಾಕುವ ಸೌಲಭ್ಯದ ದುರುಪಯೋಗ ತಪ್ಪಿಸಲು ಚುನಾವಣಾ ಆಯೋಗವು ಮೊಬೈಲ್ ಒಟಿಪಿ ಆಧಾರಿತ ‘ಇ–ಪರಿಶೀಲನಾ ವಿಧಾನ’ವನ್ನು ಜಾರಿಗೊಳಿಸಿದೆ.
ಪಟ್ಟಿಯಿಂದ ಹೆಸರು ತೆಗೆದುಹಾಕಲು ಅಥವಾ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವುದಕ್ಕೆ ಆಕ್ಷೇಪ ಸಲ್ಲಿಸುವ ವ್ಯಕ್ತಿಗಳ ಮೊಬೈಲ್ ಸಂಖ್ಯೆಗೆ ಇನ್ನು ಮುಂದೆ ‘ಒಟಿಪಿ’ ಬರಲಿದೆ. ಈ ಒಟಿಪಿ ನಮೂದಿಸಿದ ಬಳಿಕವೇ ಮುಂದಿನ ಪ್ರಕ್ರಿಯೆ ನಡೆಯಲಿದೆ.
ಮತದಾರರ ಪಟ್ಟಿಯಿಂದ ಹೆಸರು ಅಳಿಸಿ ಹಾಕಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ, ಬೇರೆ ವ್ಯಕ್ತಿಯ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಇತ್ತು. ಇದನ್ನು ತಪ್ಪಿಸಲು ‘ಇ–ಪರಿಶೀಲನಾ ವಿಧಾನ ಜಾರಿಗೆ ತರಲಾಗಿದೆ. ಮತದಾರರ ಪಟ್ಟಿಯಲ್ಲಿ ಏನೇ ಪರಿಷ್ಕರಣೆ ಆಗುವುದಿದ್ದರೂ ಅದಕ್ಕೂ ಮುನ್ನ ಮತದಾರನ ಮೊಬೈಲ್‌ಗೆ ಒಟಿಪಿ ಬರುತ್ತದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 5,994 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಯತ್ನಿಸಲಾಗಿತ್ತು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈಚೆಗೆ ಆರೋಪಿಸಿದ್ದರು. ಅದರ ಬೆನ್ನಲ್ಲೇ ಚುನಾವಣಾ ಆಯೋಗ ‘ಇ–ಪರಿಶೀಲನಾ ವಿಧಾನ’ ಜಾರಿಗೊಳಿಸಿದೆ.
‘ಮತದಾರರು ಸಂಬಂಧಿಸಿದ ಕ್ಷೇತ್ರದ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನುಅಳಿಸಿ ಹಾಕುವಂತೆ ಕೋರಿ ಆನ್‌ಲೈನ್ ಮೂಲಕ ನಮೂನೆ –7 ಸಲ್ಲಿಸಬಹುದು. ಆದರೆ, ನಮೂನೆ–7 ಸಲ್ಲಿಕೆಯಾದ ಕೂಡಲೇ ಸ್ವಯಂಚಾಲಿತವಾಗಿ ತಮ್ಮ ಹೆಸರು ಅಳಿಸಿ ಹೋಗುತ್ತದೆ ಎಂದರ್ಥವಲ್ಲ’ ಎಂದು ಆಯೋಗ ಸ್ಪಷ್ಟಪಡಿಸಿದೆ.
‘ಜ್ಞಾನೇಶ್‌ಜೀ ನಾವು ಮತಕಳ್ಳತನ ಕಂಡುಹಿಡಿದೆವು. ಆನಂತರ ನಿಮಗೆ ಬೀಗ ಹಾಕಲು ನೆನಪಾಯಿತು. ಈಗ ನಾವು ಇದರ ಹಿಂದಿನ ಕಳ್ಳರನ್ನೂ ಕಂಡು ಹಿಡಿಯುತ್ತೇವೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾವು ಮತಕಳ್ಳತನದ ವಿಷಯ ಪ್ರಸ್ತಾಪಿಸಿದ ನಂತರವಷ್ಟೇ ಚುನಾವಣಾ ಆಯೋಗ ಇದಕ್ಕೆ ಬೀಗ ಹಾಕಿದೆ. ಮುಖ್ಯ ಚುನಾವಣಾ ಅಧಿಕಾರಿ ಜ್ಞಾನೇಶ್ ಕುಮಾರ್ ಎಸ್‌ಐಟಿಗೆ ಯಾವಾಗ ದಾಖಲೆಗಳನ್ನು ಹಸ್ತಾಂತರಿಸುತ್ತಾರೆ?– ರಾಹುಲ್ ಗಾಂಧಿ ‘ಎಕ್ಸ್’ಪೋಸ್ಟ್‌ನಲ್ಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.