ನವದೆಹಲಿ: ‘ಉತ್ತರಿಸಬೇಕಾದವರು ಸಾಕ್ಷಿ ನಾಶ ಮಾಡಲು ಹೊರಟಿದ್ದಾರೆ’ ಎಂದು ಎಲೆಕ್ಟ್ರಾನಿಕ್ ದತ್ತಾಂಶ ಅಳಿಸುವ ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ, ವೆಬ್‌ಕಾಸ್ಟಿಂಗ್ ಮತ್ತು ಇತರ ವಿಡಿಯೊಗಳನ್ನು ಚುನಾವಣೆ ನಡೆದ 45 ದಿನಗಳ ಬಳಿಕ ಅಳಿಸಿ ಹಾಕುವಂತೆ ಚುನಾವಣಾ ಆಯೋಗವು ತನ್ನ ಎಲ್ಲ ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್, ‘ಮತದಾರರ ಪಟ್ಟಿ ಕೇಳಿದರೆ, ಅದು ಮೆಶಿನ್ ರಿಡೇಬಲ್ ಫಾರ್ಮ್ಯಾಟ್‌ನಲ್ಲಿ ಇರುವುದರಿಂದ ಒದಗಿಸಲು ಸಾಧ್ಯವಿಲ್ಲ ಎಂದು ಆಯೋಗ ಹೇಳಿದೆ. ಸಿಸಿಟಿವಿ ದೃಶ್ಯಾವಳಿ ಕೇಳಿದರೆ, ಅದನ್ನು ಮರೆಮಾಚಲು ಕಾನೂನನ್ನೇ ಬದಲಿಸಿದೆ. ಇನ್ನು ಫೋಟೊ ಮತ್ತು ವಿಡಿಯೊ ಸಾಕ್ಷಿಗಳನ್ನು 1 ವರ್ಷ ಕಾಪಿಟ್ಟುಕೊಳ್ಳುವ ಬದಲು ಈಗ 45 ದಿನಗಳಲ್ಲಿ ಅಳಿಸಿ ಹಾಕಲು ಹೊರಟಿದೆ’ ಎಂದು ಹೇಳಿದ್ದಾರೆ.
‘ಯಾರು ಜನರ ಪ್ರಶ್ನೆಗೆ ಉತ್ತರ ನೀಡಬೇಕಿತ್ತೋ ಅವರೇ ಸಾಕ್ಷ್ಯನಾಶಕ್ಕೆ ಮುಂದಾಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಮ್ಯಾಚ್ ಫಿಕ್ಸಿಂಗ್ ಆಗಿರುವುದು ಇದರಿಂದ ಸ್ಪಷ್ಟವಾಗುತ್ತಿದೆ. ಒಳ ಒಪ್ಪಂದ ನಡೆದಿರುವ ಚುನಾವಣೆಯು ಪ್ರಜಾಪ್ರಭುತ್ವದ ಪಾಲಿಗೆ ವಿಷವಾಗಿ ಪರಿಣಮಿಸುತ್ತದೆ’ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಆರೋಪಿಸಿದ್ದ ರಾಹುಲ್, ತಮ್ಮ ಆರೋಪಗಳಿಗೆ ಉತ್ತರ ನೀಡುವಂತೆ ಚುನಾವಣಾ ಆಯೋಗವನ್ನು ಕೇಳಿದ್ದರು. ಅಲ್ಲದೇ ಮುಂಬರುವ ಬಿಹಾರ ಚುನಾವಣೆಯಲ್ಲಿಯೂ ಮ್ಯಾಚ್ ಫಿಕ್ಸಿಂಗ್ ನಡೆಯುವ ಸಾಧ್ಯತೆಯಿದೆ ಎಂದಿದ್ದರು.
ರಾಹುಲ್ ಆರೋಪಗಳನ್ನು ಚುನಾವಣಾ ಆಯೋಗ ಅಲ್ಲಗೆಳೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.