ADVERTISEMENT

‘ಸುಪ್ರೀಂ’ ಆದೇಶವಾಗಿ 4 ದಿನ ಕಳೆದರೂ ಜಾರಿಯಾಗದ ಗೃಹ ಬಂಧನ

ಎಲ್ಗಾರ್ ಪರಿಷದ್ ಪ್ರಕರಣದ ಆರೋಪಿ ಗೌತಮ್ ನವ್‌ಲಾಖ್‌ * ಪೂರ್ಣಗೊಳ್ಳದ ಬಿಡುಗಡೆ ಪ್ರಕ್ರಿಯೆ

ಪಿಟಿಐ
Published 14 ನವೆಂಬರ್ 2022, 15:43 IST
Last Updated 14 ನವೆಂಬರ್ 2022, 15:43 IST
ಗೌತಮ್‌ ನವ್‌ಲಾಖ್‌
ಗೌತಮ್‌ ನವ್‌ಲಾಖ್‌   

ಮುಂಬೈ (ಪಿಟಿಐ): ಎಲ್ಗಾರ್‌ ಪರಿಷತ್– ಮಾವೊ ನಡುವೆ ಸಂಪರ್ಕ ಪ್ರಕರಣದಲ್ಲಿ ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತ ಗೌತಮ್ ನವ್‌ಲಾಖ್‌ (70) ಅವರನ್ನು ಗೃಹ ಬಂಧನದಲ್ಲಿರಿಸಲು ಸುಪ್ರೀಂಕೋರ್ಟ್‌ ಅನುಮತಿ ನೀಡಿ ನಾಲ್ಕು ದಿನಗಳೇ ಕಳೆದರೂ, ಆ ಕುರಿತ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

2017–18ರಲ್ಲಿ ದಾಖಲಾದ ಎಲ್ಗಾರ್‌ ಪರಿಷತ್‌ ಪ್ರಕರಣ ಸಂಬಂಧ 2020ರ ಏಪ್ರಿಲ್‌ನಲ್ಲಿ ನವ್‌ಲಾಖ್‌ ಅವರನ್ನು ಬಂಧಿಸಲಾಗಿತ್ತು. ವಿವಿಧ ಕಾಯಿಲೆಗಳಿಂದ ನರಳುತ್ತಿರುವ ಅವರು ಗೃಹಬಂಧನಕ್ಕೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಕುರಿತು ನವೆಂಬರ್‌ 10ರಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ಮುಂದಿನ 48 ಗಂಟೆಗಳಲ್ಲಿ ನವ್‌ಲಾಖ್‌ ಅವರನ್ನು ಒಂದು ತಿಂಗಳ ಮಟ್ಟಿಗೆ ಗೃಹಬಂಧನದಲ್ಲಿರಿಸುವಂತೆ ಆದೇಶಿಸಿತ್ತು. ಇದಕ್ಕೆ ಕೆಲ ಷರತ್ತುಗಳನ್ನು ವಿಧಿಸಿತ್ತು.

ADVERTISEMENT

ಆದರೆ ಅವರ ಬಿಡುಗಡೆಗೆ ಸಂಬಂಧಿಸಿದಂತೆ ಪ್ರಕ್ರಿಯೆಗಳು ಪೂರ್ಣಗೊಳ್ಳದ ಕಾರಣ ಸೋಮವಾರ ಸಂಜೆಯವರೆಗೂ ಅವರು ಜೈಲಿನಲ್ಲಿಯೇ ಇದ್ದರು. ‘ನವ್‌ಲಾಖ್‌ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವ ಸಂಬಂಧ ಮುಂಬೈನ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಸೋಮವಾರ ಪ್ರಕ್ರಿಯೆಗಳು ಆರಂಭವಾಗಿವೆ’ ಎಂದು ಅವರ ವಕೀಲರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.