ADVERTISEMENT

ಎಲ್ಗಾರ್‌ ಕೇಸ್: ಖಾಸಗಿ ಆಸ್ಪತ್ರೆಗೆ ಸ್ಟ್ಯಾನ್‌ ಸ್ವಾಮಿ ಸ್ಥಳಾಂತರಕ್ಕೆ ಸೂಚನೆ

ಪಿಟಿಐ
Published 28 ಮೇ 2021, 11:15 IST
Last Updated 28 ಮೇ 2021, 11:15 IST
ಸ್ಟ್ಯಾನ್‌ ಸ್ವಾಮಿ
ಸ್ಟ್ಯಾನ್‌ ಸ್ವಾಮಿ   

ಮುಂಬೈ: ಎಲ್ಗಾರ್‌ ಪರಿಷದ್‌–ಮಾವೊ ಪ್ರಕರಣದ ಆರೋಪಿ ಫಾದರ್‌ ಸ್ಟ್ಯಾನ್‌ ಸ್ವಾಮಿ ಅವರನ್ನು ಎರಡು ವಾರಗಳ ಚಿಕಿತ್ಸೆಗಾಗಿ ತಲೋಜಾ ಕಾರಾಗೃಹದಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಜೈಲಿನ ಅಧಿಕಾರಿಗಳಿಗೆ ಬಾಂಬೆ ಹೈಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ.

ಬುಡಕಟ್ಟು ಹಕ್ಕುಗಳ ಹೋರಾಟಗಾರ ಸ್ಟ್ಯಾನ್‌ ಸ್ವಾಮಿ ಅವರನ್ನು ಬಾಂದ್ರಾದಲ್ಲಿರುವ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ನ್ಯಾಯಮೂರ್ತಿಗಳಾದ ಎಸ್.ಎಸ್‌ ಶಿಂದೆ ಮತ್ತು ಎನ್‌.ಆರ್‌ ಬೊರ್ಕರ್‌ ಅವರ ಪೀಠವು ಸೂಚಿಸಿದೆ.

ಸ್ಟ್ಯಾನ್‌ ಸ್ವಾಮಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯ ಇರುವುದನ್ನು ಮನಗಂಡು ಮಧ್ಯಂತರ ಜಾಮೀನು ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಸಂಬಂಧ ನ್ಯಾಯಮೂರ್ತಿ ಎಸ್. ಕಾತ್ವವಾಲಾ ಅವರ ನೇತೃತ್ವದ ರಜಾ ಕಾಲದ ನ್ಯಾಯಪೀಠವು ವಿಚಾರಣೆ ನಡೆಸುತ್ತಿದೆ.

ADVERTISEMENT

ಈ ನಡುವೆ ಸ್ವಾಮಿ ಅವರ ಪರ ವಕೀಲರಾದ ದೇಸಾಯಿ ಅವರು ಜಾಮೀನು ಅರ್ಜಿಯ ವಿಚಾರಣೆ ಕೂಡಲೇ ನಡೆಸಬೇಕು ಎಂದು ಕೋರಿ ನ್ಯಾಯಮೂರ್ತಿ ಎಸ್‌.ಎಸ್‌ ಶಿಂದೆ ಮತ್ತು ಎನ್‌.ಆರ್‌ ಬೊರ್ಕರ್‌ ಅವರ ಪೀಠದ ಮೊರೆ ಹೋಗಿದ್ದಾರೆ.

ಈ ಸಂಬಂಧ ವಿಚಾರಣೆ ನಡೆಸಿದ ಪೀಠವು,‘ ಜಾಮೀನು ಅರ್ಜಿಯ ಕುರಿತ ತೀರ್ಪು ಹೊರಬೀಳುವವರೆಗೆ ಸ್ಟ್ಯಾನ್‌ ಸ್ವಾಮಿ ಅವರನ್ನು ಜೆಜೆ ಆಸ್ಪತ್ರೆಗೆ ದಾಖಲಿಸಬಹುದು ಎಂದು ಹೇಳಿತು. ಆದರೆ, ಇದನ್ನು ನಿರಾಕರಿಸಿದ ಸ್ವಾಮಿ ಅವರು,‘ನನ್ನನ್ನು ಈ ಹಿಂದೆಯೂ ಎರಡು ಬಾರಿ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ನನಗೆ ಸರಿಯಾದ ಚಿಕಿತ್ಸೆ ಸಿಕ್ಕಿಲ್ಲ ಎಂದರು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಸ್ಟ್ಯಾನ್‌ ಸ್ವಾಮಿ ಅವರನ್ನು ಎರಡು ವಾರಗಳ ಚಿಕಿತ್ಸೆಗಾಗಿಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದೆ.

ಅಲ್ಲದೆ ಆಸ್ಪತ್ರೆಯ ನಿಯಮಗಳಿಗೆ ಅನುಸಾರವಾಗಿ ಸ್ವಾಮಿ ಅವರ ಸಹೋದ್ಯೋಗಿ ಫಾದರ್‌ ಫ್ರೇಜಿಯರ್ ಅವರಿಗೆ ಆಸ್ಪತ್ರೆಗೆ ಭೇಟಿ ನೀಡಲು ಕೂಡ ಹೈಕೋರ್ಟ್‌ ಅನುಮತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.