ADVERTISEMENT

ಎನ್‌ಕೌಂಟರ್; ಐವರು ಉಗ್ರರ ಹತ್ಯೆ, ಬಾಲಕನ ಸಾವು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 20:27 IST
Last Updated 22 ಮಾರ್ಚ್ 2019, 20:27 IST
ಬಂಡಿಪೊರದಲ್ಲಿ ಬಾಲಕ ಆತೀಫ್‌ ಮಿರ್‌ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸ್ಥಳೀಯರು -------– ಎಎಫ್‌ಪಿ ಚಿತ್ರ
ಬಂಡಿಪೊರದಲ್ಲಿ ಬಾಲಕ ಆತೀಫ್‌ ಮಿರ್‌ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸ್ಥಳೀಯರು -------– ಎಎಫ್‌ಪಿ ಚಿತ್ರ   

ಶ್ರೀನಗರ:ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಶುಕ್ರವಾರ ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಐವರು ಉಗ್ರರು ಮತ್ತು ಒತ್ತೆಯಾಳಾಗಿದ್ದ ಬಾಲಕನನ್ನು ಹತ್ಯೆ ಮಾಡಲಾಗಿದೆ.

ಸಾವಿಗೀಡಾದ ಇಬ್ಬರು ಉಗ್ರರು ಪಾಕಿಸ್ತಾನ ಮೂಲದವರು. ಅಲಿ ಮತ್ತು ಹುಬೈಬ್‌ ಎಂದು ಇವರನ್ನು ಗುರುತಿಸಲಾಗಿದೆ.

’ಬಂಡಿಪೋರ ಜಿಲ್ಲೆಯ ಮೀರ್‌ ಮೊಹಲ್ಲಾ ಎಂಬಲ್ಲಿ ಉಗ್ರರು 12 ವರ್ಷದ ಬಾಲಕನನ್ನು ಒತ್ತೆಯಾಳಾಗಿಟ್ಟುಕೊಂಡಿದ್ದರು. ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ಬಾಲಕನೂ ಸಾವಿಗೀಡಾಗಿದ್ದಾನೆ‘ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಶೋಪಿಯಾನ್‌ ಜಿಲ್ಲೆಯ ಇಮಾಂಸಾಹಿಬ್‌ ಪ್ರದೇಶದಲ್ಲಿ ಶುಕ್ರವಾರ ಎನ್‌ಕೌಂಟರ್‌ ಮಾಡಲಾಯಿತು. ಇದೇ ಸ್ಥಳದಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸೇನೆಯ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದರು. ಭದ್ರತಾ ಪಡೆಗಳು ಮರು ದಾಳಿ ಮಾಡಿದವು.

ಜೈಷ್‌–ಎ–ಮೊಹಮ್ಮದ್‌ ಉಗ್ರರು ಸಾವಿಗೀಡಾಗಿದ್ದು, ಕಾರ್ಯಾಚರಣೆಯಲ್ಲಿ ಮೂವರು ಯೋಧರೂ ಗಾಯಗೊಂಡಿದ್ದಾರೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ, ಶೋಪಿಯಾನ್, ಕುಲ್ಗಮ್‌ ಮತ್ತು ಅನಂತ್‌ನಾಗ್‌ ಜಿಲ್ಲೆಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸ್ಥಳೀಯ ಉಗ್ರ
ಗಾಮಿ ಪ್ರವೃತ್ತಿ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

‘ದಕ್ಷಿಣ ಕಾಶ್ಮೀರದಲ್ಲಿ ಸ್ಥಳೀಯ ಉಗ್ರರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ, ಇವರಿಗೆ ಸರಿಯಾದ ತರಬೇತಿ ಇಲ್ಲ. ಶಸ್ತ್ರಾಸ್ತ್ರಗಳೂ ಅವರ ಬಳಿ ಇಲ್ಲ. ಆದರೆ, ಗಡಿ ನಿಯಂತ್ರಣ ರೇಖೆ ಬಳಿಯ, ಉತ್ತರ ಕಾಶ್ಮೀರದ ಸ್ಥಳೀಯ ಉಗ್ರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ, ಕಾಶ್ಮೀರದ ಉತ್ತರ ಭಾಗದಲ್ಲಿ ಹೆಚ್ಚು ಎನ್‌ಕೌಂಟರ್‌ಗಳು ನಡೆಯಲಿವೆ‘ ಎಂದು ಪೊಲೀಸ್‌ ಅಧಿಕಾರಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.