ADVERTISEMENT

‘ವಾಯುಮಾಲಿನ್ಯಕ್ಕೆ ಕೃಷಿ ತ್ಯಾಜ್ಯ ದಹನ ಕಾರಣ’

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಆರೋಪ

ಪಿಟಿಐ
Published 1 ನವೆಂಬರ್ 2019, 19:22 IST
Last Updated 1 ನವೆಂಬರ್ 2019, 19:22 IST
ಅಮೃತಸರ ಹೊರವಲಯದ ಹೊಲವೊಂದರಲ್ಲಿ ಕೃಷಿ ತ್ಯಾಜ್ಯಕ್ಕೆ ಶುಕ್ರವಾರ ಬೆಂಕಿ ಇಡಲಾಗಿತ್ತು –ಪಿಟಿಐ ಚಿತ್ರ
ಅಮೃತಸರ ಹೊರವಲಯದ ಹೊಲವೊಂದರಲ್ಲಿ ಕೃಷಿ ತ್ಯಾಜ್ಯಕ್ಕೆ ಶುಕ್ರವಾರ ಬೆಂಕಿ ಇಡಲಾಗಿತ್ತು –ಪಿಟಿಐ ಚಿತ್ರ   

ನವದೆಹಲಿ :ದೆಹಲಿಯಲ್ಲಿ ವಾಯುಮಾಲಿನ್ಯ ಅತ್ಯಂತ ಅಪಾಯಕಾರಿ ಮಟ್ಟಕ್ಕೆ ತಲುಪಿರುವುದು ದೆಹಲಿ ಮತ್ತು ಕೇಂದ್ರ ಸರ್ಕಾರದ ನಡುವಣ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ತ್ಯಾಜ್ಯವನ್ನು ಸುಡುವುದೇ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಲು ಕಾರಣ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.

ಈ ವಿಚಾರವನ್ನು ರಾಜಕೀಯಗೊಳಿಸುವ ಬದಲು, ಮಾಲಿನ್ಯ ನಿಯಂತ್ರಿಸುವ ಕ್ರಮಗಳ ಬಗ್ಗೆ ಯೋಚನೆ ಮಾಡಿ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ADVERTISEMENT

ಆದರೆ, ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಲು ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ತ್ಯಾಜ್ಯ ಸುಡುತ್ತಿರುವುದೂ ಒಂದು ಕಾರಣ. ಈ ತ್ಯಾಜ್ಯವನ್ನು ಸುಡುವುದರಿಂದ ಬರುವ ಹೊಗೆಯಲ್ಲಿ ಪಿ.ಎಂ 2.5 ಮಾಲಿನ್ಯ ಕಣಗಳು ಅಧಿಕವಾಗಿವೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ‍ಪ್ರಾಧಿಕಾರ ಹೇಳಿದೆ. ಕೃಷಿ ತ್ಯಾಜ್ಯ ಸುಡುವುದರ ವಿರುದ್ಧ ಎರಡೂ ರಾಜ್ಯಗಳಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆಯನ್ನೂ ಪ್ರಾಧಿಕಾರವು ಬಿಡುಗಡೆ ಮಾಡಿದೆ.

ದೆಹಲಿಯ ಶಾಲಾ ಮಕ್ಕಳಿಗೆ ಮುಖಗವಸು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಜ್ರಿವಾಲ್ ಅವರು, ‘ಪಂಜಾಬ್‌ ಮತ್ತು ಹರಿಯಾಣದಲ್ಲಿ ಕೃಷಿ ತ್ಯಾಜ್ಯ ಸುಡುವುದಕ್ಕೆ ಆಯಾ ರಾಜ್ಯಗಳ ಮುಖ್ಯಮಂತ್ರಿಗಳಾದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಮನೋಹರ ಲಾಲ್ ಖಟ್ಟರ್ ಅವರು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಕೃಷಿ ತ್ಯಾಜ್ಯ ಸುಡುವುದನ್ನು ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಿ ಎಂದು ದೆಹಲಿಯ ಶಾಲಾ ಮಕ್ಕಳು ಕ್ಯಾ‍ಪ್ಟನ್ ಅಂಕಲ್‌ ಮತ್ತು ಖಟ್ಟರ್ ಅಂಕಲ್‌ಗೆ ಪತ್ರ ಬರೆಯಬೇಕು’ ಎಂದು ಕೇಜ್ರಿವಾಲ್‌ ಆಗ್ರಹಿಸಿದರು.

ಇದರ ಬೆನ್ನಲ್ಲೇ ಪ್ರಕಾಶ್ ಜಾವಡೇಕರ್ ಅವರು, ‘ದೆಹಲಿಯಲ್ಲಿ ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದರೂ, ದೆಹಲಿ ಸರ್ಕಾರವು ತನ್ನ ಪಾಲಿನ ಹಣ ನೀಡಿರಲಿಲ್ಲ. ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದ ನಂತರವಷ್ಟೇ ದೆಹಲಿ ಸರ್ಕಾರ ಎಚ್ಚೆತ್ತುಕೊಂಡಿತು. ಈ ರಸ್ತೆಯ ನಿರ್ಮಾಣದ ನಂತರ ಸರಕು ಸಾಗಣೆ ವಾಹನಗಳು ದೆಹಲಿ ಪ್ರವೇಶಿಸುವುದು ಕಡಿಮೆಯಾಯಿತು. ಮಾಲಿನ್ಯ ನಿಯಂತ್ರಿಸಲು ದೆಹಲಿ ಸರ್ಕಾರವು ರಚನಾತ್ಮಕವಾಗಿ ಯೋಚನೆ ಮಾಡಬೇಕು’ ಎಂದು ಹೇಳಿದರು.

ಕೃಷಿ ತ್ಯಾಜ್ಯ ಸುಡುವ ಪ್ರಕರಣಗಳು

(ಅಕ್ಟೋಬರ್ 27–30ರ ನಡುವೆ)

19,869 ಪಂಜಾಬ್

4,211 ಹರಿಯಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.