ADVERTISEMENT

ಹಣ ಮರುಪಾವತಿ: ಹಕ್ಕು ವಿವಾದ ಇತ್ಯರ್ಥಪಡಿಸಿ; HCಗೆ ಸುಪ್ರೀಂ ಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 23:30 IST
Last Updated 5 ಸೆಪ್ಟೆಂಬರ್ 2025, 23:30 IST
–
   

ನವದೆಹಲಿ: ಭವಿಷ್ಯನಿಧಿ ವಂತಿಗೆ ಪಾವತಿಸುವಲ್ಲಿ ವಿಫಲವಾಗಿರುವ ಅಕ್ರೊಪೆಟಲ್ ಟೆಕ್ನಾಲಜೀಸ್ ಪ್ರೈವೆಟ್‌ ಲಿಮಿಟೆಡ್‌ ಕಂಪನಿಯ ಸ್ವತ್ತುಗಳ ಮಾರಾಟದಿಂದ ಸಂಗ್ರಹವಾಗಿರುವ ಹಣದ ಮೇಲೆ, ಇಪಿಎಫ್‌ಒ ಹಾಗೂ ಸಾಲ ನೀಡಿರುವ ‌ಎಕ್ಸಿಸ್‌ ಬ್ಯಾಂಕ್‌ ಮತ್ತು ಇತರ ಎರಡು ಬ್ಯಾಂಕುಗಳ ಪೈಕಿ ಯಾರು ಮೊದಲು ಹಕ್ಕು ಹೊಂದಿದ್ದಾರೆ ಎಂಬ ಬಗ್ಗೆ  ನಿರ್ಧರಿಸುವಂತೆ ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಈ ವಿಚಾರವಾಗಿ ಎಡೆಲ್‌ವೀಸ್ ಅಸೆಟ್ ರಿಕನ್‌ಸ್ಟ್ರಕ್ಷನ್ ಲಿಮಿಟೆಡ್‌ನ(ಇಎಆರ್‌ಎಲ್) ಮೇಲ್ಮನವಿ ವಜಾಗೊಳಿಸಿ ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ಫೆಬ್ರುವರಿ 1ರಂದು ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ.

ನ್ಯಾಯಮೂರ್ತಿಗಳಾದ ವಿಕ್ರಮನಾಥ್, ಸಂಜಯ ಕರೋಲ್‌ ಹಾಗೂ ಸಂದೀಪ್ ಮೆಹ್ತಾ ಅವರು ಇದ್ದ ನ್ಯಾಯಪೀಠವು,ಇಎಆರ್‌ಎಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.

ADVERTISEMENT

ಈ ವಿವಾದಕ್ಕೆ ಸಂಬಂಧಿಸಿ ಕಕ್ಷಿದಾರರ‌ರಾಗಿರುವ ಎಲ್ಲ ಸಂಸ್ಥೆಗಳು ಹೈಕೋರ್ಟ್‌ ಮುಂದೆ ತಮ್ಮ ವಾದ ಮಂಡಿಸಲು ಸ್ವತಂತ್ರವಾಗಿವೆ ಎಂದೂ ಪೀಠ ಹೇಳಿದೆ.

ವಿಚಾರಣೆ ವೇಳೆ, ಇಎಆರ್‌ಎಲ್‌ ಪರ ಹಿರಿಯ ವಕೀಲ ಕೃಷ್ಣನ್ ವೇಣುಗೋಪಾಲ್, ‘ಬಾಕಿ ಇರುವ ವಂತಿಗೆ ಹಣದ ಮೇಲೆ ಇ‍ಪಿಎಫ್‌ಒಗೆ ಮೊದಲ ಹಕ್ಕು ಇದೆ’ ಎಂದರು.

‘ಕಂಪನಿಗೆ ಸಾಲ ನೀಡಿರುವ ಬ್ಯಾಂಕುಗಳ ಪೈಕಿ ಎಕ್ಸಿಸ್‌ ಬ್ಯಾಂಕ್, ಒಂದು ಸ್ವತ್ತನ್ನು ₹12 ಕೋಟಿಗೆ ಮಾರಾಟ ಮಾಡಿದೆ. ಕಂಪನಿಯು ಎರಡು ಸ್ವತ್ತುಗಳನ್ನು ಒಟ್ಟು ₹7 ಕೋಟಿಗೆ ಮಾರಾಟ ಮಾಡಿದೆ. ಹೀಗಾಗಿ, ಇಪಿಎಫ್‌ಒ ತನಗೆ ಬರಬೇಕಾದ ಬಾಕಿ ಮೊತ್ತವನ್ನು ಎಕ್ಸಿಸ್‌ ಬ್ಯಾಂಕ್‌ನಿಂದ ವಸೂಲು ಮಾಡಿಕೊಳ್ಳಬಹುದು’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

‘ಪಿಎಫ್‌ ಕಾಯ್ದೆಯಡಿ, ಬಾಕಿ ಮೊತ್ತವನ್ನು ಎಕ್ಸಿಸ್‌ ಬ್ಯಾಂಕಿನಿಂದ ಮಾಡಿಕೊಳ್ಳಬೇಕೇ ಹೊರತು ಮೇಲ್ಮನವಿದಾರರಿಂದಲ್ಲ’ ಎಂದೂ ವಾದಿಸಿದರು.

ಇಪಿಎಫ್‌ಒ ಪರ ಹಾಜರಿದ್ದ ವಕೀಲ ದುಷ್ಯಂತ ಪರಾಶರ, ‘ಮೇಲ್ಮನವಿದಾರರ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್‌ನ ಕ್ರಮ ಸರಿಯಾಗಿಯೇ ಇದೆ’ ಎಂದರು.

‘ಎಸ್‌ಎಆರ್‌ಎಫ್‌ಎಇಎಸ್‌ಐ ಕಾಯ್ದೆಯ ಸೆಕ್ಷನ್ 35ರ ಪ್ರಕಾರ, ಬ್ಯಾಂಕಿನ ಸಾಲ ಮರುಪಾವತಿಯೇ ಆದ್ಯತೆಯಾಗಲಿದೆ. ಹೀಗಾಗಿ, ಭವಿಷ್ಯನಿಧಿ ವಂತಿಗೆ ಸಂಬಂಧಿಸಿ ಬ್ಯಾಂಕಿನಿಂದ ಯಾವುದೇ ವಸೂಲಾತಿ ಮಾಡುವ ಹಾಗಿಲ್ಲ’ ಎಂದು ಎಕ್ಸಿಸ್‌ ಬ್ಯಾಂಕ್‌ ಪರ ಹಾಜರಿದ್ದ ಹಿರಿಯ ವಕೀಲ ಗೋಪಾಲ್‌ ಜೈನ್‌, ಪೀಠಕ್ಕೆ
ತಿಳಿಸಿದರು.

ಎಲ್ಲ ಕಕ್ಷಿದಾರರ ವಾದ ಆಲಿಸಿದ ಪೀಠ, ‘ವಸೂಲಾಗಬೇಕಾದ ಬಾಕಿ ಮೊತ್ತದ ಮೇಲೆ ಇಪಿಎಫ್‌ಒ, ಎಕ್ಸಿಸ್‌ ಬ್ಯಾಂಕ್‌, ಎಸ್‌ಬಿಐ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರಾವಂಕೂರ್(ಈಗ ಎಸ್‌ಬಿಐನಲ್ಲಿ ವಿಲೀನವಾಗಿದೆ) ಪೈಕಿ ಯಾರಿಗೆ ಮೊದಲ ಹಕ್ಕು ಇದೆ ಎಂಬ ಬಗ್ಗೆ ಹೈಕೋರ್ಟ್‌ ನಿರ್ಧರಿಸಲಿದೆ’ ಎಂದು ಪೀಠ, ಅರ್ಜಿ ವಿಲೇವಾರಿ ಮಾಡಿತು.

‘ದಾಖಲೆ ಇಲ್ಲದ ವಹಿವಾಟು: ಅಲ್ಲಗಳೆಯಲಾಗದು’

ಚೆಕ್‌, ಬ್ಯಾಂಕ್‌ ವರ್ಗಾವಣೆ ದಾಖಲೆ ಅಥವಾ ರಶೀದಿ ಇಲ್ಲ ಎಂಬ ಕಾರಣಕ್ಕೆ ಹಣಕಾಸಿನ ವಹಿವಾಟು ನಡೆದೇ ಇಲ್ಲ ಎನ್ನಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

‘ಹಣದ ವಹಿವಾಟು ಎಂದಮೇಲೆ ಅದರಲ್ಲಿ ನಗದು ಕೂಡ ಇರಬಹುದು. ಅದು ಅಸಹಜವೇನೂ ಅಲ್ಲ’ ಎಂದು ಕೋರ್ಟ್‌ ತಿಳಿಸಿದೆ.

ವ್ಯಕ್ತಿಯೊಬ್ಬರು ಅಧಿಕೃತ ವಿಧಾನಗಳ ಮೂಲಕ (ನೆಗೋಶಿಯಬಲ್ ಇನ್‌ಸ್ಟ್ರುಮೆಂಟ್ಸ್‌ ಅಥವಾ ಬ್ಯಾಂಕ್‌ ವಹಿವಾಟು) ಹಣ ವರ್ಗಾವಣೆಯನ್ನು ಸಾಬೀತುಪಡಿಸಲು ಸಾಧ್ಯವಾಗದೇ ಇದ್ದರೆ, ಅಂತಹ ಮೊತ್ತವನ್ನು ನಗದು ಮೂಲಕ ಪಾವತಿಸಲಾಗಿಲ್ಲ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಅದರಲ್ಲೂ ಸಾಲ ಮರುಪಾವತಿ ಕುರಿತು ಸ್ಪಷ್ಟವಾಗಿ ವಚನಪತ್ರ ಇದ್ದಲ್ಲಿ ಹಾಗೆ ನಿರ್ಧರಿಸಲು ಆಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್‌ ಅಮಾನುಲ್ಲಾ ಮತ್ತು ವಿಪುಲ್‌.ಎಂ ಪಾಂಚೋಲಿ ಅವರ ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.