ADVERTISEMENT

ಪ್ರತಿಕೂಲ ಹವಾಮಾನ ಅವಘಡ; ಜೂನ್‌–ಆಗಸ್ಟ್‌ನಲ್ಲಿ 435 ಸಾವು

ಪಿಟಿಐ
Published 1 ಅಕ್ಟೋಬರ್ 2021, 9:22 IST
Last Updated 1 ಅಕ್ಟೋಬರ್ 2021, 9:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ದೇಶದಲ್ಲಿ ಪ್ರತಿಕೂಲ ಹವಾಮಾನ ಸಂಬಂಧಿತ ಅವಘಡಗಳಿಂದ ಈ ವರ್ಷದ ಜೂನ್‌ –ಆಗಸ್ಟ್‌ ತಿಂಗಳ ಅವಧಿಯಲ್ಲಿ ಒಟ್ಟು 435 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಮೂರನೇ ಒಂದರಷ್ಟು ಸಾವು ಪ್ರಕರಣಗಳು ಮಹಾರಾಷ್ಟ್ರದಲ್ಲಿಯೇ ಸಂಭವಿಸಿವೆ.

ನೈರುತ್ಯ ಮುಂಗಾರು ಅವಧಿಯಲ್ಲಿ ಈ ಅವಘಡಗಳು ಸಂಭವಿಸಿವೆ. ಒಟ್ಟು ಪ್ರಕರಣಗಳಲ್ಲಿ ಸಿಡಿಲು ಬಡಿದು ಸಂಭವಿಸಿದ ಸಾವುಗಳು ಶೇ 50ಕ್ಕೂ ಹೆಚ್ಚಿದೆ. ಸುಮಾರು 240 ಜನರು ಸಿಡಿಲಿನಿಂದ ಸತ್ತಿದ್ದಾರೆ ಎಂದು ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ತಿಳಿಸಿದೆ.

ಒಟ್ಟು ಪ್ರಕರಣಗಳಲ್ಲಿ ಜೂನ್‌ ತಿಂಗಳಲ್ಲಿ 109, ಜುಲೈ ತಿಂಗಳಲ್ಲಿ 301 ಮತ್ತು ಆಗಸ್ಟ್‌ ತಿಂಗಳಲ್ಲಿ 25 ಮಂದಿ ಮೃತಪಟ್ಟಿದ್ದಾರೆ. ಮೂರನೇ ಒಂದರಷ್ಟು ಗಂಭೀರ ಸ್ವರೂಪದ ಪ್ರಕರಣಗಳು ಮಹಾರಾಷ್ಟ್ರದಲ್ಲಿಯೇ ಸಂಭವಿಸಿವೆ.

ADVERTISEMENT

ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ, ಪ್ರವಾಹ, ಭೂಕುಸಿತ ಪ್ರಕರಣಗಳಿಂದ 213 ಜನರು ಜುಲೈ ತಿಂಗಳಲ್ಲಿ ಮೃತಪಟ್ಟಿದ್ದಾರೆ. ಕೊಂಕಣ, ಪಶ್ಚಿಮ ಮಹಾರಾಷ್ಟ್ರದಲ್ಲಿ ಹೆಚ್ಚಿನ ಅವಘಡ ಸಂಭವಿಸಿವೆ ಎಂದು ಐಎಂಡಿ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಅವರು ತಿಳಿಸಿದ್ದಾರೆ.

ಹಿರಿಯ ಹವಾಮಾನ ಪರಿಣತರು ಸಲ್ಲಿಸಿರುವ ವರದಿಯ ಅನುಸಾರ, ಕಳೆದ ಐವತ್ತು ವರ್ಷಗಳಲ್ಲಿ ಅಂದರೆ 1970 ರಿಂದ 2019ರ ಅವಧಿಯಲ್ಲಿ ಸುಮಾರು 7,063 ಅವಘಡಗಳು ಸಂಭವಿಸಿವೆ. ಒಟ್ಟು 1,41,308 ಜನರು ಮೃತಪಟ್ಟಿದ್ದಾರೆ. 1971–2019ರ ಅವಧಿಯಲ್ಲಿ ಸಿಡಿಲು ಬಡಿದು ಒಟ್ಟು 8,862 ಮಂದಿ ಮೃತಪಟ್ಟಿದ್ದಾರೆ ಎಂದು ಐಎಂಡಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.