ADVERTISEMENT

ಬ್ಯಾಂಕ್‌ಗೆ ಅಕ್ಕಸಾಲಿಗ ವಂಚನೆ: ಬಂಧನ

ಪಿಟಿಐ
Published 15 ಸೆಪ್ಟೆಂಬರ್ 2019, 20:30 IST
Last Updated 15 ಸೆಪ್ಟೆಂಬರ್ 2019, 20:30 IST
   

ಮುಂಬೈ: ಇಂಡಿಯನ್ ಬ್ಯಾಂಕ್‌ನಲ್ಲಿ ಬಂಗಾರದ ಆಭರಣ ಮೌಲ್ಯಮಾಪನ ಮಾಡುತ್ತಿದ್ದ ಅಕ್ಕಸಾಲಿಗರೊಬ್ಬರನ್ನು ನಕಲಿ ಗ್ರಾಹಕರ ಹೆಸರಿನಲ್ಲಿ ₹3.77 ಕೋಟಿ ವಂಚನೆ ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ.

ನಗರದಲ್ಲಿ ಆಭರಣ ಅಂಗಡಿ ನಡೆಸುತ್ತಿದ್ದ ರಾಮಸ್ವಾಮಿ ನಾಡಾರ್‌ ಅವರು ಇಂಡಿಯನ್ ಬ್ಯಾಂಕ್‌ನ ಧಾರಾವಿ ಶಾಖೆಯಲ್ಲಿ ಮೌಲ್ಯಮಾಪಕರಾಗಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

ಸಾಲ ಕಟ್ಟದ ಗ್ರಾಹಕರ ಆಭರಣಗಳನ್ನು ಹರಾಜು ಮಾಡುವ ನಿರ್ಧಾರ ಕೈಗೊಂಡಿದ್ದರಿಂದ ಲಾಕರ್‌ನಲ್ಲಿದ್ದ 77 ಪ್ಯಾಕೆಟ್‌ನಲ್ಲಿದ್ದ ಬಂಗಾರವನ್ನು ತೆಗೆಯಲಾಗಿತ್ತು. ಆದರೆ, ಅದರಲ್ಲಿದ್ದ ಬಹುತೇಕ ಆಭರಣಗಳು ನಕಲಿಯಾಗಿದ್ದವು. ತಕ್ಷಣ ಎಚ್ಚೆತ್ತುಕೊಂಡು ಬ್ಯಾಂಕ್ ಆಡಳಿತ ಮಂಡಳಿ ಈ ಸಂಬಂಧ ಧಾರಾವಿ ಠಾಣೆಗೆ ದೂರು ನೀಡಿತ್ತು.

ADVERTISEMENT

ಬಂಧನದ ತಕ್ಷಣ ಇದರಲ್ಲಿ ನನ್ನ ಪಾತ್ರ ಇಲ್ಲ ಎಂದು ಆರೋಪಿ ನಾಡಾರ್‌ ಹೇಳಿದರೂ ಆತನ ಹೇಳಿಕೆಗಳಲ್ಲಿ ತೀವ್ರ ಗೊಂದಲ ಮೂಡಿತ್ತು. ಮತ್ತಷ್ಟು ವಿಚಾರಣೆ ನಡೆಸಿದ ನಂತರ, ದಾದರ್‌ನಲ್ಲಿ ನಕಲಿ ಬಂಗಾರ ಖರೀದಿಸಿ ಅಸಲಿ ಪ್ರಮಾಣ ಪತ್ರ ನೀಡಿದ್ದಾಗಿ ಒಪ್ಪಿಕೊಂಡಿದ್ದು, ಈ ಅಕ್ರಮದಲ್ಲಿ 12 ಗ್ರಾಹಕರು ಶಾಮೀಲಾಗಿದ್ದಾರೆ ಎಂದು ಧಾರಾವಿ ಠಾಣೆಯ ಹಿರಿಯ ಪೊಲೀಸ್‌ ಅಧಿಕಾರಿ ಸುರೇಶ್‌ ಪಾಟೀಲ್ ತಿಳಿಸಿದ್ದಾರೆ.

‘ಚಿನ್ನದ ಮೇಲೆ ಸಾಲ ತೆಗೆದುಕೊಳ್ಳುವವರಿಗೆ ಪ್ರಮಾಣಪತ್ರವನ್ನು ನೀಡುವುದು ನಾಡಾರ್ ಅವರ ಕೆಲಸವಾಗಿತ್ತು. ಆದರೆ, ಆರೋಪಿ ತಮ್ಮ 12 ಸಹಚರರನ್ನು ಗ್ರಾಹಕರಂತೆ ತೋರಿಸಿದ್ದ ಹಾಗೂ ಪ್ಯಾನ್ ಮತ್ತು ಆಧಾರ್ ಕಾರ್ಡ್‌ ದಾಖಲೆಗಳನ್ನಾಗಿ ಬಳಸಿದ್ದು, ಆ ಗ್ರಾಹಕರು ನಕಲಿ ಚಿನ್ನವನ್ನು ಬ್ಯಾಂಕಿನಲ್ಲಿ ಠೇವಣಿಯಾಗಿ ಇಟ್ಟು ಹಣ ಪಡೆದಿದ್ದಾರೆ’ ಎಂದೂ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.