ಲಖನೌ/ಗಾಜಿಯಾಬಾದ್(ಪಿಟಿಐ): ಹಲವು ಕಾಲ್ಪಿನಿಕ ‘ದೇಶಗಳ’ ಹೆಸರಿನಲ್ಲಿ ನಕಲಿ ರಾಯಭಾರಿ ಕಚೇರಿಗಳನ್ನು ನಡೆಸುತ್ತಿದ್ದ ಆರೋಪದ ಮೇಲೆ ಗಾಜಿಯಾಬಾದ್‌ನ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಹರ್ಷವರ್ಧನ ಜೈನ್ ಬಂಧಿತ ‘ಸ್ವಯಂ ಘೋಷಿತ ರಾಜತಾಂತ್ರಿಕ’. ಈತನಿಂದ ₹44.7 ಲಕ್ಷ ನಗದು, ವಿವಿಧ ದೇಶಗಳ ಕರೆನ್ಸಿಗಳು, ತಿರುಚಲಾದ ‘ರಾಜತಾಂತ್ರಿಕರ ಪಾಸ್‌ಪೋರ್ಟ್’ಗಳು ಹಾಗೂ ವಾಹನಗಳಿಗೆ ಅಳವಡಿಸಿದ್ದ 18 ನಕಲಿ ನೋಂದಣಿಸಂಖ್ಯೆಯ ಫಲಕಗಳನ್ನು ಉತ್ತರ ಪ್ರದೇಶ ಎಸ್‌ಟಿಎಫ್ ಅಧಿಕಾರಿಗಳು ಮಂಗಳವಾರ ವಶಪಡಿಸಿದ್ದಾರೆ.
‘ತಾನು ‘ಪಶ್ಚಿಮ ಆರ್ಕ್ಟಿಕಾ’ ದೇಶದ ರಾಯಭಾರಿ ಅಥವಾ ರಾಜತಾಂತ್ರಿಕ ಅಧಿಕಾರಿ ಎಂದು ಹೇಳಿಕೊಳ್ಳುತ್ತಿದ್ದ ಜೈನ್, ದೆಹಲಿ ಹೊರವಲಯದಲ್ಲಿ ಬಾಡಿಗೆ ಕಟ್ಟಡವೊಂದರಲ್ಲಿ ನಕಲಿ ರಾಯಭಾರಿ ಕಚೇರಿ ಸ್ಥಾಪಿಸಿದ್ದ’ ಎಂದು ಎಡಿಜಿಪಿ ಅಮಿತಾಭ್ ಯಶ್ ಬುಧವಾರ ತಿಳಿಸಿದರು.
‘ಸಬೋರ್ಗಾ’, ‘ಲೊಡೊನಿಯಾ’, ‘ಪೌಲ್ವಿಯಾ’ ಎಂಬ ಅಸ್ತಿತ್ವದಲ್ಲಿಯೇ ಇಲ್ಲದಂತಹ ದೇಶಗಳ ರಾಯಭಾರಿ ಎಂಬುದಾಗಿಯೂ ಜೈನ್ ಹೇಳಿಕೊಂಡಿದ್ದ. ರಾಜತಾಂತ್ರಿಕರಿಗೆ ನೀಡುವ ನೋಂದಣಿ ಸಂಖ್ಯೆಗಳಿರುವ ನಕಲಿ ಫಲಕಗಳನ್ನು ಅಳವಡಿಸಿದ್ದ ವಾಹನಗಳನ್ನು ಬಳಸುತ್ತಿದ್ದ’ ಎಂದು ತಿಳಿಸಿದರು.
‘ಇತರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ರಾಷ್ಟ್ರಪತಿ, ಪ್ರಧಾನಿ ಸೇರಿ ಹಲವು ಗಣ್ಯರೊಂದಿಗೆ ತಾನು ನಿಂತಿರುವಂತೆ ತೋರುವ ಮಾರ್ಪಡಿಸಿದ ಭಾವಚಿತ್ರಗಳನ್ನು ಕೂಡ ಬಳಸುತ್ತಿದ್ದ ಎನ್ನಲಾಗಿದೆ’ ಎಂದರು.
‘ವಿವಾದಾತ್ಮಕ ದೇವಮಾನವ ಚಂದ್ರಸ್ವಾಮಿ, ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ವಿತರಕ ಅಡ್ನಾನ್ ಖಶೋಗಿ ಜೊತೆ ಜೈನ್ ನಂಟು ಹೊಂದಿದ್ದ’ ಎಂದೂ ತಿಳಿಸಿದರು.
ಜೈನ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸಿಪಿ (ಕವಿನಗರ) ಭಾಸ್ಕರ್ ವರ್ಮಾ ತಿಳಿಸಿದರು.
ತರಹೇವಾರಿ ರಾಷ್ಟ್ರಗಳು... ‘ಪಶ್ಚಿಮ ಆರ್ಕ್ಟಿಕಾ’ ಎಂಬುದು ಅಂಟಾರ್ಟಿಕಾದಲ್ಲಿರುವ ಅತ್ಯಂತ ಚಿಕ್ಕ ದೇಶ. ಇದನ್ನು ಯಾವ ದೇಶವೂ ಮಾನ್ಯ ಮಾಡುವುದಿಲ್ಲ. ಹವಾಮಾನ ಬದಲಾವಣೆ ಕುರಿತು ಕಾರ್ಯಕ್ರಮಗಳನ್ನು ಕೈಗೊಳ್ಳುವುದಕ್ಕಾಗಿ ರಚಿಸಿರುವ ಲಾಭ ಮಾಡುವ ಉದ್ದೇಶವಿಲ್ಲದ ‘ದೇಶ’ ಇದು ಎಂಬುದು ಇಂಟರ್‌ನೆಟ್‌ನಲ್ಲಿ ಜಾಲಾಡಿದಾಗ ತಿಳಿದುಬರುತ್ತದೆ. ‘ಲೊಡೊನಿಯಾ’ ಎಂಬುದು ಸ್ವೀಡನ್‌ನ ದಕ್ಷಿಣದಲ್ಲಿರುವ ಸ್ವಯಂ ಘೋಷಿತ ಪ್ರದೇಶ. ಇದನ್ನು ಕೂಡ ಒಂದು ದೇಶ ಎಂಬುದಾಗಿ ಗುರುತಿಸಲಾಗುವುದಿಲ್ಲ. ಐಷಾರಾಮಿ ಕಾರುಗಳಿಗೆ ಈ ‘ದೇಶ’ಗಳ ‘ಬಾವುಟ’ಗಳನ್ನು ಜೈನ್ ಅಳವಡಿಸಿರುತ್ತಿದ್ದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.