ADVERTISEMENT

‘ಮಾಜಿ ಸಚಿವರು ನಾಪತ್ತೆ ಅಲ್ವಾ, ಫೆಂಟಾಸ್ಟಿಕ್’ ಇದು ಸುಪ್ರೀಂಕೋರ್ಟ್ ಉದ್ಗಾರ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 9:49 IST
Last Updated 12 ನವೆಂಬರ್ 2018, 9:49 IST
   

ನವದೆಹಲಿ: ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಸಚಿವೆ ಮಂಜು ವರ್ಮಾ ಅವರನ್ನು ಬಂಧಿಸದ ಪೊಲೀಸರ ನಿಷ್ಕ್ರಿಯತೆಯನ್ನು ಸುಪ್ರೀಂಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿತು. ಮುಂದಿನ ವಿಚಾರಣೆಯಲ್ಲಿ ಈ ಕುರಿತು ವಿವರಣೆ ನೀಡಲು ಬಿಹಾರದ ಪೊಲೀಸ್ ಮುಖ್ಯಸ್ಥರು ಖುದ್ದು ಹಾಜರಿರಬೇಕು ಎಂದು ಆದೇಶಿಸಿತು.

‘ಮಾಜಿ ಸಚಿವೆಯನ್ನು ಬಂಧಿಸಲು ಸಾಧ್ಯವಾಗಿಲ್ಲ’ ಎನ್ನುವ ಪೊಲೀಸರ ವಿವರಣೆಯನ್ನು ಕೇಳಿ ಕೆಂಡಾಮಂಡಲವಾದ ನ್ಯಾಯಮೂರ್ತಿ ಮದನ್ ಬಿ.ಲೊಕೂರ್, ‘ಫೆಂಟಾಸ್ಟಿಕ್! ಸಚಿವೆಯೊಬ್ಬರು ತಲೆಮರೆಸಿಕೊಂಡಿದ್ದಾರೆ ಅಲ್ಲವೇ? ಫೆಂಟಾಸ್ಟಿಕ್. ಸಚಿವರೊಬ್ಬರು ಪರಾರಿಯಾಗಿದ್ದಾರೆ, ಅವರು ಎಲ್ಲಿದ್ದಾರೆ ಎನ್ನುವುದು ನಿಮಗ್ಯಾರಿಗೂ ಗೊತ್ತಿಲ್ಲ ಅಲ್ಲವೇ?ಇದು ಹೇಗೆ ನಡೆಯಲು ಸಾಧ್ಯ? ನಿಮಗೆ ಪ್ರಕರಣದ ಗಾಂಭೀರ್ಯ ಅರ್ಥವಾಗಿದೆಯೇ? ಸಚಿವೆಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಹೇಗೆ ಹೇಳುತ್ತೀರಿ. ನಿಮ್ಮದು ಅತಿಯಾಯ್ತು’ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಮುಝಾಫರ್‌ನಗರದಸರ್ಕಾರಿ ಆಶ್ರಯ ನಿವಾಸದಲ್ಲಿ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ವರದಿಯಾದ ನಂತರ ಸಮಾಜ ಕಲ್ಯಾಣ ಖಾತೆ ಸಚಿವೆ ಮಂಜು ವರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಪ್ರಕರಣದ ಮುಖ್ಯ ಆರೋಪಿ ಬ್ರಜೇಶ್ ಠಾಕೂರ್ ಜೊತೆಗೆಮಂಜು ವರ್ಮಾ ಅವರ ಪತಿ ಚಂದ್ರಶೇಖರ್ ವರ್ಮಾ 17ಕ್ಕೂ ಹೆಚ್ಚುಬಾರಿ ಮಾತನಾಡಿದ್ದರು ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿತ್ತು.

ADVERTISEMENT

ಆಗಸ್ಟ್‌ನಲ್ಲಿ ಬೇಗುಸರಾಯ್‌ನಲ್ಲಿರುವ ಅವರ ಹತ್ತಿರದ ಸಂಬಂಧಿಕರನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದಾಗ 50 ಕಾಡತೂಸುಗಳು ಪತ್ತೆಯಾಗಿದ್ದವು. ಈ ಸಂಬಂಧ ಮಂಜು ವರ್ಮಾ ಮತ್ತು ಅವರ ಪತಿಯ ವಿರುದ್ಧ ಶಸ್ತ್ರಾಸ್ತ್ರ ಕಾನೂನಿನ ಅನ್ವಯ ಎಫ್‌ಐಆರ್‌ ದಾಖಲಿಸಲಾಗಿತ್ತು.ಸುಪ್ರೀಂಕೋರ್ಟ್‌ಗೆ ವರ್ಮಾ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಅದರೆ ಅವರು ಶರಣಾಗಿರಲಿಲ್ಲ. ಪೊಲೀಸರೂ ಅವರನ್ನು ಬಂಧಿಸಿರಲಿಲ್ಲ.

‘ಸರ್ಕಾರ ಪ್ರಕರಣವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ’ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ‘ಮುಂದಿನ ವಿಚಾರಣೆ ವೇಳೆ ರಾಜ್ಯದ ಮುಖ್ಯ ಕಾರ್ಯದರ್ಶಿಯೇ ಉಪಸ್ಥಿತರಿದ್ದು, ಆಶ್ರಯ ನಿವಾಸಗಳ ನಿರ್ವಹಣೆ ಮಾಹಿತಿ ನೀಡಬೇಕು’ ಎಂದು ಆದೇಶಿಸಿದೆ. ನ.27ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.