ಶ್ರೀನಗರ: ಭಾರತೀಯ ವಾಯುಪಡೆಯ ಮಹಿಳಾ ಅಧಿಕಾರಿಯೊಬ್ಬರು ಶ್ರೀನಗರ ವಾಯುನೆಲೆಯ ವಿಂಗ್ ಕಮಾಂಡರ್ ವಿರುದ್ಧ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
‘ವಿಂಗ್ ಕಮಾಂಡರ್ ಪಿ.ಕೆ.ಶೆಹರವಾತ್ ಅವರು ಅತ್ಯಾಚಾರವೆಸಗಿ, ಜೀವ ಬೆದರಿಕೆ ಒಡ್ಡಿದ್ದಾರೆ’ ಎಂದು ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ. ಅವರು ನೀಡಿದ ದೂರು ಆಧರಿಸಿ ವಿಂಗ್ ಕಮಾಂಡರ್ ವಿರುದ್ಧ ಐಪಿಸಿ ಸೆಕ್ಷನ್ 376 –2 (ಮಹಿಳೆ ಮೇಲೆ ಬಲವಂತದಿಂದ ನಿರಂತರ ಅತ್ಯಾಚಾರ) ಅಡಿಯಲ್ಲಿ ಬುದ್ಗಾಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘2023ರ ಡಿಸೆಂಬರ್ 31ರಂದು ಅಧಿಕಾರಿಗಳ ಮೆಸ್‌ನಲ್ಲಿ ಆಯೋಜಿಸಿದ್ದ ಹೊಸ ವರ್ಷದ ಔತಣ ಕೂಟದಲ್ಲಿ ಈ ಘಟನೆ ನಡೆದಿತ್ತು’ ಎಂದು ಸ್ಥಳೀಯ ಸುದ್ದಿಸಂಸ್ಥೆ ‘ಕೆಡಿಸಿ’ ವರದಿ ಮಾಡಿದೆ.
‘ಉಡುಗೊರೆ ಸ್ವೀಕರಿಸುವಂತೆ ತನ್ನ ಕೊಠಡಿಗೆ ಕರೆಸಿಕೊಂಡಿದ್ದ ಅಧಿಕಾರಿಯು ಲೈಂಗಿಕ ದೌರ್ಜನ್ಯವೆಸಗಿದ್ದರು. ಇದಕ್ಕೆ ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದರೂ, ಬಲವಂತವಾಗಿ ಕಿರುಕುಳ ನೀಡಿದರು’ ಎಂದು ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.
ವಿಂಗ್ ಕಮಾಂಡರ್ ವಿರುದ್ಧ ಎಫ್‌ಐಆರ್ ದಾಖಲಾಗಿರುವುದನ್ನು ಪೊಲೀಸ್ ಅಧಿಕಾರಿಯು ಖಚಿತಪಡಿಸಿದ್ದಾರೆ. ‘ಈಗಾಗಲೇ ಸಾಕ್ಷ್ಯ ಸಂಗ್ರಹಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಅಗತ್ಯಬಿದ್ದರೆ, ಅಧಿಕಾರಿಯನ್ನು ಪ್ರಶ್ನಿಸಲು ಕರೆಸಿಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.