ADVERTISEMENT

ರಸಗೊಬ್ಬರ ಕಂಪನಿಗಳಿಂದ ಪ್ರತಿ ದಿನ 50 ಟನ್‌ ಆಮ್ಲಜನಕ ಪೂರೈಕೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 11:10 IST
Last Updated 28 ಏಪ್ರಿಲ್ 2021, 11:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿನ ರಸಗೊಬ್ಬರ ಕಂಪನಿಗಳು ಇನ್ನು ಮುಂದೆ ಪ್ರತಿ ದಿನ 50 ಟನ್‌ ವೈದ್ಯಕೀಯ ಆಮ್ಲಜನಕವನ್ನು ಆಸ್ಪತ್ರೆಗಳಿಗೆ ಪೂರೈಸಲಿವೆ.

ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆಮ್ಲಜನಕಕ್ಕೆ ಅಪಾರ ಬೇಡಿಕೆ ಇದೆ. ಹೀಗಾಗಿ, ರಸಗೊಬ್ಬರ ಕಂಪನಿಗಳು ಈ ಕ್ರಮಕೈಗೊಂಡಿವೆ. ಇದರಿಂದ, ಆಸ್ಪತ್ರೆಗಳಲ್ಲಿನ ಆಮ್ಲಜನಕ ಕೊರತೆ ನೀಗಿಸಲು ಸಹಾಯವಾಗಲಿದೆ ಎಂದು ರಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸುಖ್‌ ಮಂದಾವಿಯಾ ಬುಧವಾರ ತಿಳಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಹಾಗೂ ಸಹಕಾರಿ ಕ್ಷೇತ್ರದಲ್ಲಿನ ರಸಗೊಬ್ಬರ ಕಂಪನಿಗಳ ಮುಖ್ಯಸ್ಥರ ಜತೆ ಸಚಿವರು ಸಭೆ ನಡೆಸಿ, ಆಮ್ಲಜನಕ ಉತ್ಪಾದನೆ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿದರು.

ADVERTISEMENT

ಪ್ರತಿ ಗಂಟೆಗೆ 200 ಕ್ಯೂಬಿಕ್‌ ಮೀಟರ್‌ನಷ್ಟು ಉತ್ಪಾದನೆ ಸಾಮರ್ಥ್ಯದ ಘಟಕವನ್ನು ಇಫ್ಕೊ ಗುಜರಾತ್‌ನ ಕಲೋಲ್‌ನಲ್ಲಿ ಸ್ಥಾಪಿಸಲಿದೆ. ಪ್ರತಿ ದಿನಕ್ಕೆ 33,000 ಕ್ಯೂಬಿಕ್‌ ಮೀಟರ್‌ ಸಾಮರ್ಥ್ಯ ಇದು ಹೊಂದಲಿದೆ ಎಂದು ಸಚಿವ ಮನ್ಸುಖ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುಜರಾತ್‌ ರಾಜ್ಯ ಗೊಬ್ಬರ ಮತ್ತು ರಸಾಯನಿಕ (ಜಿಎಸ್‌ಎಫ್‌ಸಿ) ಕಂಪನಿ ತನ್ನ ಘಟಕದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ದ್ರವೀಕೃತ ಆಮ್ಲಜನಕ ಪೂರೈಸಲು ಆರಂಭಿಸಿದೆ. ಇದೇ ರೀತಿ ಗುಜರಾತ್‌ ನರ್ಮದಾ ಕಣಿವೆ ಗೊಬ್ಬರ ಮತ್ತು ರಸಾಯನಿಕ ಲಿಮಿಟೆಡ್‌ (ಜಿಎನ್‌ಎಫ್‌ಸಿ) ಕಂಪನಿ ಸಹ ವೈದ್ಯಕೀಯ ಉದ್ದೇಶಕ್ಕೆ ದ್ರವೀಕೃತ ಆಮ್ಲಜಕ ಪೂರೈಸಲು ಆರಂಭಿಸಿದೆ. ಇತರ ಕಂಪನಿಗಳು ಕಾರ್ಪೋರೇಟ್‌ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ಅಡಿಯಲ್ಲಿ ಈ ಕಾರ್ಯಕೈಗೊಳ್ಳಲಿವೆ ಎಂದು ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.