ನವದೆಹಲಿ: ಮುಂಬರುವ ಜನಗಣತಿಗಾಗಿ ಮನೆಗಳ ಪಟ್ಟಿ ಮಾಡುವ ಕಾರ್ಯಾಚರಣೆ (ಎಚ್‌ಎಲ್‌ಒ) 2026ರ ಏ.1ರಂದು ಪ್ರಾರಂಭವಾಗಲಿದೆ.
ಮನೆ ಪಟ್ಟಿ ಕಾರ್ಯಾಚರಣೆಯೊಂದಿಗೆ ಜನಗಣತಿಯ ಮೊದಲ ಹಂತಕ್ಕೆ ಚಾಲನೆ ದೊರೆಯಲಿದೆ ಎಂದು ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ತಿಳಿಸಿದ್ದಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ಪತ್ರ ಬರೆದಿದ್ದು, ‘ಮೊದಲ ಹಂತದ ಆರಂಭಕ್ಕೂ ಮುನ್ನ ಗಣತಿದಾರರು ಮತ್ತು ಮೇಲ್ವಿಚಾರಕರ ನೇಮಕಾತಿ ಹಾಗೂ ಅವರಿಗೆ ಕೆಲಸದ ಹಂಚಿಕೆಯನ್ನು ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ಮಾಡಲಾಗುತ್ತದೆ’ ಎಂದಿದ್ದಾರೆ.
ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಮನೆ ಪಟ್ಟಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ. ಇಲ್ಲಿ ದೇಶದ ಪ್ರತಿಯೊಂದು ಕಟ್ಟಡಕ್ಕೆ ಭೇಟಿ ನೀಡಿ ಕಟ್ಟಡಗಳು ಮತ್ತು ಮನೆಗಳ ಗುಣಲಕ್ಷಣಗಳನ್ನು ದಾಖಲಿಸಲಾಗುತ್ತದೆ. ಪ್ರತಿ ಮನೆಯಲ್ಲಿರುವ ಸ್ವತ್ತುಗಳ ದತ್ತಾಂಶ ಸಂಗ್ರಹಿಸಲಾಗುವುದು.
ಎರಡನೇ ಹಂತದಲ್ಲಿ ಜನಸಂಖ್ಯಾ ಗಣತಿ ನಡೆಯುತ್ತದೆ. ಇಲ್ಲಿ ಪ್ರತಿಯೊಬ್ಬರ ವೈಯಕ್ತಿಕ ದತ್ತಾಂಶಗಳ ಮೇಲೆ ಗಮನ ಕೇಂದ್ರೀಕರಿಸಿ, ಮಾಹಿತಿ ಕಲೆಹಾಕಲಾಗುತ್ತದೆ.
ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ನಡೆಸಲು ಕೇಂದ್ರ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ.
ಜನಗಣತಿ ಪ್ರಕ್ರಿಯೆಗೆ 34 ಲಕ್ಷ ಗಣತಿದಾರರು ಮತ್ತು ಮೇಲ್ವಿಚಾರಕರು ಹಾಗೂ 1.3 ಲಕ್ಷ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ದೇಶದಲ್ಲಿ ಮೊದಲ ಡಿಜಿಟಲ್ ಜನಗಣತಿಯಾಗಲಿರುವ ಈ ಪ್ರಕ್ರಿಯೆಯು ನಾಗರಿಕರಿಗೆ ಸ್ವಯಂ-ಗಣತಿಗೆ ಒಳಪಡಲು ಅವಕಾಶ ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.