ADVERTISEMENT

ಪ್ರವಾಹ ಪರಿಹಾರ ಕಾರ್ಯಗಳಿಗೆ 90 ತಂಡಗಳು ಸನ್ನದ್ಧ: ಎನ್‌ಡಿಆರ್‌ಎಫ್‌

ಪಿಟಿಐ
Published 4 ಜುಲೈ 2020, 8:45 IST
Last Updated 4 ಜುಲೈ 2020, 8:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಪ್ರವಾಹ ಪರಿಹಾರ ಕಾರ್ಯಗಳಿಗಾಗಿ ದೇಶದ ವಿವಿಧ ಭಾಗಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) 90 ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಕೋವಿಡ್‌–19 ಕಾರಣದಿಂದ ಈ ತಂಡಗಳು ಎಲ್ಲ ಅಗತ್ಯ ಮುನ್ನೆಚ್ಚರಿಕೆ ವಹಿಸಲಿವೆ’ ಎಂದು ಎನ್‌ಡಿಆರ್‌ಎಫ್‌ನ ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.

ಗೃಹಸಚಿವ ಅಮಿತ್‌ ಶಾ ಶುಕ್ರವಾರ ತಮ್ಮ ಕಚೇರಿಯಲ್ಲಿ ಮಳೆ ಮತ್ತು ಪ್ರವಾಹ ನಿರ್ವಹಣೆಗೆ ಸಿದ್ಧತೆಗಳ ಕುರಿತು ಪರಿಶೀಲಿಸಿದರು. ಸಂಭವನೀಯ ಹಾನಿ ತಡೆಗೆ ವಿಸ್ತೃತ ಯೋಜನೆಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

‘ಪ್ರವಾಹಪೀಡಿತರ ರಕ್ಷಣೆಗೆ ಸಂಬಂಧಿಸಿದೇಶದಾದ್ಯಂತ 90 ತಂಡಗಳನ್ನು ಸಿದ್ಧವಾಗಿಟ್ಟಿದ್ದೇವೆ. ಪ್ರತಿ ತಂಡದಲ್ಲಿ 45 ಮಂದಿ ಸಿಬ್ಬಂದಿ ಇರುತ್ತಾರೆ. ಗಾಳಿ ತುಂಬಿಸುವ ದೋಣಿಗಳೂ ಸೇರಿದಂತೆ ಅಗತ್ಯ ಎಲ್ಲಾ ಉಪಕರಣಗಳು ಈ ತಂಡದಲ್ಲಿ ಇರುತ್ತವೆ’ ಎಂದು ಎನ್‌ಡಿಆರ್‌ಎಫ್‌ನ ಮಹಾನಿರ್ದೇಶಕ ಎನ್‌.ಎಸ್. ಪ್ರಧಾನ್‌ ತಿಳಿಸಿದ್ದಾರೆ.

ADVERTISEMENT

‘ಕೋವಿಡ್‌ ಮಾರ್ಗದರ್ಶಿ ಸೂತ್ರಗಳನ್ನು ಗಮನದಲ್ಲಿಟ್ಟುಕೊಂಡು, ರಕ್ಷಣಾ ಸಿಬ್ಬಂದಿಗೆ ತಂಗಲು ಅಗತ್ಯವಾದ ಸುರಕ್ಷಿತ ಜಾಗವನ್ನು ಒದಗಿಸಲುರಾಜ್ಯಗಳಿಗೆ ಪತ್ರ ಬರೆಯಲಾಗಿದೆ. ಈ ತಂಡಗಳು ತಮ್ಮ ಜತೆಗೆ ಉಷ್ಣಾಂಶ ಪರೀಕ್ಷಾ ಉಪಕರಣ, ಮಾಸ್ಕ್‌, ಸ್ಯಾನಿಟೈಸರ್‌ ಹಾಗೂ ಅಗತ್ಯ ಆರೋಗ್ಯ ಕಿಟ್‌ಗಳನ್ನು ಒಯ್ಯಲಿದ್ದಾರೆ’ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಈಚೆಗೆಪಶ್ಚಿಮ ಬಂಗಾಳದಲ್ಲಿಅಂಪನ್‌ ಚಂಡಮಾರುತ ಸಮಯದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಎನ್‌ಡಿಆರ್‌ಎಫ್‌ನ 60 ಸಿಬ್ಬಂದಿಗೆಸೋಂಕು ತಗುಲಿತ್ತು. ಅವರಲ್ಲಿ ಹೆಚ್ಚಿನವರುಗುಣಮುಖರಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.