ವಿ. ರಾಮಸುಬ್ರಮಣಿಯನ್
Credit: sci.gov.in
ನವದೆಹಲಿ: ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ ಅವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ನೂತನ ಅಧ್ಯಕ್ಷರನ್ನಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಿಸಿದ್ದಾರೆ. ಜತೆಗೆ ಇಬ್ಬರ ಸದಸ್ಯರ ನೇಮಕವೂ ಆಗಿದೆ ಎಂದು ಆಯೋಗ ಸೋಮವಾರ ತಿಳಿಸಿದೆ.
ಆಯೋಗದ ಅಧ್ಯಕ್ಷ ಸ್ಥಾನದಲ್ಲಿದ್ದ ಅರುಣ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿ ಜೂನ್ 1ಕ್ಕೆ ಕೊನೆಗೊಂಡಿತ್ತು. ಅಲ್ಲಿಂದ ಈ ಹುದ್ದೆ ಖಾಲಿಯಿತ್ತು.
‘ಮಾಜಿ ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ ಅವರನ್ನು ಎನ್‌ಎಚ್‌ಆರ್‌ಸಿ ಅಧ್ಯಕ್ಷರನ್ನಾಗಿ ಹಾಗೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಮತ್ತು ಮಾಜಿ ನ್ಯಾಯಮೂರ್ತಿ ವಿದ್ಯುತ್ ರಂಜನ್ ಸಾರಂಗಿ ಅವರನ್ನು ಸದಸ್ಯರನ್ನಾಗಿ ರಾಷ್ಟ್ರಪತಿಯವರು ನೇಮಕ ಮಾಡಿದ್ದಾರೆ’ ಎಂದು ಎನ್‌ಎಚ್‌ಆರ್‌ಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಆಯೋಗದ ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಡಿಸೆಂಬರ್ 18ರಂದು ಸಭೆ ಸೇರಿ ಚರ್ಚಿಸಿತ್ತು. ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅಥವಾ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿಯನ್ನು ಎನ್‌ಎಚ್‌ಆರ್‌ಸಿ ಅಧ್ಯಕ್ಷರನ್ನಾಗಿ ನೇಮಿಸಬಹುದು. ಆಯ್ಕೆ ಸಮಿತಿ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿ ಈ ನೇಮಕ ಮಾಡುತ್ತಾರೆ. ಈ ಹಿಂದೆ ಸಿಜೆಐಗಳಾದ ಎಚ್.ಎಲ್.ದತ್ತು ಮತ್ತು ಕೆ.ಜಿ.ಬಾಲಕೃಷ್ಣನ್ ಅವರು ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮಿಶ್ರಾ ಅವರ ಅಧಿಕಾರಾವಧಿ ಪೂರ್ಣಗೊಂಡಾಗಿನಿಂದ ಆಯೋಗದ ಸದಸ್ಯೆ ವಿಜಯ ಭಾರತಿ ಸಯಾನಿ ಪ್ರಭಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.