ADVERTISEMENT

ವಿಮಾನ ಹಾರಾಟ ತರಬೇತಿ: ರಾಜ್ಯದಲ್ಲಿ 4 ಕೇಂದ್ರ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 19:31 IST
Last Updated 9 ಸೆಪ್ಟೆಂಬರ್ 2021, 19:31 IST
   

ನವದೆಹಲಿ: ಹಾರಾಟ ತರಬೇತಿಗಾಗಿ ದೇಶದಲ್ಲಿ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದ ಎಂಟು ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಅವುಗಳ ಪೈಕಿ ನಾಲ್ಕು ಕರ್ನಾಟಕದ ಪಾಲಾಗಿವೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಎರಡು ಮತ್ತು ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಎರಡು ಕೇಂದ್ರಗಳು ತಲೆ ಎತ್ತಲಿವೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ನೂರು ದಿನಗಳ ಹೊಸ ನೀತಿಗಳು ಮತ್ತು ಗುರಿಗಳ ಬಗ್ಗೆ ಅವರು ಗುರುವಾರ ಮಾತನಾಡಿದರು.

ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ ಮಾರಾಟದ ಬಿಡ್‌ ಪ್ರಕ್ರಿಯೆಯ ಗಡುವನ್ನು ವಿಸ್ತರಿಸುವ ಯೋಚನೆ ಇಲ್ಲ ಎಂದು ಜ್ಯೋತಿರಾದಿತ್ಯ ತಿಳಿಸಿದ್ದಾರೆ. ಇದೇ 15 ಅನ್ನು ಬಿಡ್‌ ದಿನಾಂಕವಾಗಿ ಗುರುತಿಸಲಾಗಿದೆ.

ಐದು ವಿಮಾನ ನಿಲ್ದಾಣಗಳು, ಆರು ಹೆಲಿಪೋರ್ಟ್‌ಗಳು ಮತ್ತು 50 ಹೊಸ ವಿಮಾನ ಯಾನ ಮಾರ್ಗಗಳು ಮುಂದಿನ ನೂರು ದಿನಗಳಲ್ಲಿ ಆರಂಭ ಆಗಲಿವೆ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ವಿಮಾನ ನಿಲ್ದಾಣ ಪ್ರಾಧಿಕಾರವು ಹಾರಾಟ ತರಬೇತಿ ಸಂಘಟನೆಗಳಿಗೆ (ಎಫ್‌ಟಿಒ) ಸಂಬಂಧಿಸಿದ ನೀತಿಗಳನ್ನು ಉದಾರಗೊಳಿಸಿದೆ. ವಿಮಾನ ನಿಲ್ದಾಣಕ್ಕೆ ನೀಡಬೇಕಿದ್ದ ರಾಯಧನವನ್ನು (ಎಫ್‌ಟಿಒಗಳಿಂದ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸಲ್ಲುವ ವರಮಾನ) ರದ್ದುಪಡಿಸಲಾಗಿದೆ. ಬಾಡಿಗೆಯನ್ನು ಹಲವು ಕೋಟಿ ರೂಪಾಯಿಗಳಿಂದ ₹15 ಲಕ್ಷಕ್ಕೆ ಇಳಿಸಲಾಗಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಅವರು ವಿವರಿಸಿದರು.

ಎಂಟು ಎಫ್‌ಟಿಒಗಳ ಪೈಕಿ ನಾಲ್ಕು ಕರ್ನಾಟಕದಲ್ಲಿ ಸ್ಥಾಪನೆಯಾದರೆ, ಮಹಾರಾಷ್ಟ್ರದ ಜಲಗಾಂವ್‌, ಮಧ್ಯ ಪ್ರದೇಶದ ಖಜುರಾಹೊ ಮತ್ತು ಅಸ್ಸಾಂನ ಲಿಲಬರಿಯಲ್ಲಿ ತಲಾ ಒಂದೊಂದು ಸ್ಥಾಪನೆ ಆಗಲಿವೆ. ಕಲಬುರ್ಗಿಯ ಎರಡು ಎಫ್‌ಟಿಒಗಳು ತರಬೇತಿ ಕಾರ್ಯಾಚರಣೆಗೆ ಆಗಸ್ಟ್‌ 15ರಂದೇ ಚಾಲನೆ ನೀಡಿವೆ ಎಂದು ಹೇಳಿದ್ದಾರೆ.

ಮರುಜೋಡಣೆ ಕೇಂದ್ರ

ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಮರುಜೋಡಣೆಯ ಕೇಂದ್ರವಾಗಿ ಭಾರತವನ್ನು ಬೆಳೆಸುವ ದಿಸೆಯಲ್ಲಿಯೂ ಕೆಲಸ ಆರಂಭವಾಗಿದೆ. ಇದಕ್ಕೆ ಸಂಬಂಧಿಸಿದ ನೀತಿಯನ್ನು ಸರಳಗೊಳಿಸಲಾಗಿದೆ. ನಿರ್ವಹಣೆ, ದುರಸ್ತಿ ಮತ್ತು ಮರುಜೋಡಣೆ ಕೇಂದ್ರಗಳಾಗಿ ದೆಹಲಿ, ಕೋಲ್ಕತ್ತ, ತಿರುಪತಿ, ಬೇಗಂಪೇಟ್‌, ಭೋಪಾಲ್‌, ಚೆನ್ನೈ ಮತ್ತು ಚಂಡೀಗಡ ವಿಮಾನ ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ. ಈ ಕೇಂದ್ರಗಳಿಗೆ ಖಾಸಗಿ ಹೂಡಿಕೆಗೆ ಉತ್ತೇಜನ ನೀಡಲಾಗುವುದು ಎಂದು ಸಿಂಧಿಯಾ ಹೇಳಿದ್ದಾರೆ.

ನಾಗರಿಕ ವಿಮಾನಗಳ ಜತೆಗೆ ಸೇನಾ ವಿಮಾನಗಳ ದುರಸ್ತಿ–ನಿರ್ವಹಣೆಯನ್ನೂ ನಡೆಸುವ ಬಗ್ಗೆ ಚಿಂತನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.