ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ಹೆಚ್ಚುತ್ತಿದೆ: ಸುಪ್ರೀಂ

ಪಿಟಿಐ
Published 8 ಅಕ್ಟೋಬರ್ 2020, 12:17 IST
Last Updated 8 ಅಕ್ಟೋಬರ್ 2020, 12:17 IST
judiciary 
judiciary    

ನವದೆಹಲಿ: ‘ಇತ್ತೀಚಿನ ದಿನಗಳಲ್ಲಿ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಹೆಚ್ಚುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಅಭಿಪ್ರಾಯಪಟ್ಟಿದೆ.

‘ಈ ವರ್ಷದ ಮಾರ್ಚ್‌ನಲ್ಲಿ ನಡೆದಿದ್ದ ತಬ್ಲಿಗ್‌‌ ಜಮಾತ್‌ ಸಭೆಯಿಂದಾಗಿಯೇ ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿದ್ದಾಗಿ ಕೆಲ ಮಾಧ್ಯಮಗಳು ಬಿಂಬಿಸುತ್ತಿವೆ. ಆ ಮೂಲಕ ಕೋಮು ದ್ವೇಷಹರಡುತ್ತಿವೆ’ ಎಂದು ಆರೋಪಿಸಿ ಜಮೀಯತ್‌ ಉಲಮಾ–ಐ–ಹಿಂದ್‌ ಹಾಗೂ ಇತರ ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು. ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ಹಾಗೂ ನ್ಯಾಯಮೂರ್ತಿಗಳಾದ ಎಸ್‌.ಎ. ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್‌ ಅವರಿದ್ದ ತ್ರಿಸದಸ್ಯ ಪೀಠವು ವಿಡಿಯೊ ಕಾನ್ಫರೆನ್ಸ್‌ ಮೂಲಕ ಈ ಅರ್ಜಿಯ ವಿಚಾರಣೆ ನಡೆಸಿತು.

ಜಮಾತ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ದುಷ್ಯಂತ್‌ ದಾವೆ ‘ಅರ್ಜಿದಾರರು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರವು ತನ್ನ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದೆ’ ಎಂದರು.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಪೀಠವು, ‘ನಿಮಗೆ ಬೇಕಾದ ರೀತಿಯಲ್ಲಿ ವಾದ ಮಂಡಿಸಲು ನೀವು ಸ್ವಾತಂತ್ರ್ಯ ಹೊಂದಿರುವಿರಿ. ಅದೇ ರೀತಿ, ಪ್ರಮಾಣ ಪತ್ರದಲ್ಲಿ ತಮಗೆ ಅನಿಸಿದ್ದನ್ನು ಉಲ್ಲೇಖಿಸಲು ಅವರೂ ಸ್ವತಂತ್ರರಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟಿತು.

ತಬ್ಲಿಗ್‌ ಜಮಾತ್‌ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಕುರಿತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸಲ್ಲಿಸಿರುವ ಪ್ರಮಾಣ ಪತ್ರದ ಬಗ್ಗೆಯೂ ಪೀಠ ಅಸಮಾಧಾನ ವ್ಯಕ್ತಪಡಿಸಿತು.

‘ಹೆಚ್ಚುವರಿ ಕಾರ್ಯದರ್ಶಿ ಸಲ್ಲಿಸಿರುವ ಪ್ರಮಾಣ ಪ‍ತ್ರದಲ್ಲಿ ಆರೋಪಗಳಿಗೆ ಉತ್ತರಿಸಿಲ್ಲ. ಇದು ಅಸಂಬದ್ಧ ಹಾಗೂ ಜಾರಿಕೆಯ ಪ್ರಮಾಣ ಪತ್ರದಂತೆ ಕಾಣುತ್ತಿದೆ’ ಎಂದು ಪೀಠವು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಹೇಳಿತು.

‘ಈ ಪ್ರಮಾಣಪತ್ರದಲ್ಲಿ ಅನಗತ್ಯ ವಿಷಯಗಳಿವೆ ಮತ್ತು ಈ ಪ್ರಮಾಣಪತ್ರವನ್ನು ಸಚಿವಾಲಯದ ಕಾರ್ಯದರ್ಶಿ ಸಲ್ಲಿಸಬೇಕಾಗಿತ್ತು. ಇಂತಹ ಪ್ರಕರಣಗಳಲ್ಲಿ ಮಾಧ್ಯಮಗಳು ಪ್ರಚೋದಿತ ವರದಿಗಳನ್ನು ಪ್ರಕಟಿಸದಂತೆ ಈ ಹಿಂದೆ ಯಾವ ರೀತಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವ ಬಗ್ಗೆ ಕಾರ್ಯದರ್ಶಿ ಅವರೇ ಪ್ರಮಾಣಪತ್ರ ಸಲ್ಲಿಸಬೇಕು’ ಎಂದು ಸೂಚಿಸಿತು.

ಈ ಪ್ರಕರಣದ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.