ADVERTISEMENT

ಬಹುಪತ್ನಿತ್ವ, ನಿಖಾ ಹಲಾಲ್ ಪ್ರಶ್ನಿಸಿದ ಅರ್ಜಿಗಳ ವಿಚಾರಣೆಗೆ ಪೀಠ ರಚನೆ: ಸಿಜೆಐ

ಪಿಟಿಐ
Published 23 ಮಾರ್ಚ್ 2023, 14:08 IST
Last Updated 23 ಮಾರ್ಚ್ 2023, 14:08 IST
   

ನವದೆಹಲಿ: ಬಹುಪತ್ನಿತ್ವ ಹಾಗೂ ನಿಖಾ ಹಲಾಲ್‌ಗೆ ಇರುವ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಗಾಗಿ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ರಚಿಸುವುದಾಗಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್‌ ಅವರು ಗುರುವಾರ ತಿಳಿಸಿದರು.

ಬಹುಪತ್ನಿತ್ವ ಹಾಗೂ ನಿಖಾ ಹಲಾಲ್‌ಗೆ ಅವಕಾಶ ನೀಡುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 494 ಅನ್ನು ರದ್ದು ಮಾಡಬೇಕು, ಈ ಎರಡನ್ನೂ ಅಸಾಂವಿಧಾನಿಕ ಹಾಗೂ ಅಕ್ರಮ ಎಂದು ಘೋಷಿಸಬೇಕು ಎಂದು ವಕೀಲ ಅಶ್ವಿನ್‌ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿ.ಎಸ್‌. ನರಸಿಂಹ ಮತ್ತು ಜೆ.ಬಿ. ಪಾರ್ದೀವಾಲಾ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆಯನ್ನು ನಡೆಸಿತು. ‘ನಾನು ಈ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇನೆ. ಮತ್ತು ಇದಕ್ಕಾಗಿ ಸಾಂವಿಧಾನಿಕ ಪೀಠವನ್ನೂ ರಚಿಸುತ್ತೇನೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರು ಹೇಳಿದರು.

ADVERTISEMENT

ಇದೇ ಅರ್ಜಿಯ ಸಂಬಂಧ ಕಳೆದ ವರ್ಷ ಆಗಸ್ಟ್‌ 30ರಂದು ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ನೋಟಿಸ್‌ ನೀಡಿ, ಅರ್ಜಿಯ ಸಂಬಂಧ ಪ್ರತಿಕ್ರಿಯೆ ನೀಡುವಂತೆ ತಿಳಿಸಿತ್ತು.

ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಹೇಮಂತ್‌ ಗುಪ್ತಾ, ಸೂರ್ಯಕಾಂತ್‌, ಎಂ.ಎಂ. ಸುಂದ್ರೇಶ್‌ ಹಾಗೂ ಸುಧಾಂಶು ಧೂಲಿಯಾ ಅವರಿದ್ದರು. ಆದರೆ, ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಹೇಮಂತ್‌ ಗುಪ್ತಾ ಅವರು ಅದೇ ವರ್ಷ ಸೆ.23 ಹಾಗೂ ಅ.6ರಂದು ಕ್ರಮವಾಗಿ ನಿವೃತ್ತಿ ಹೊಂದಿದರು. ಸುಮಾರು 8 ಅರ್ಜಿಗಳನ್ನು ಈ ಪೀಠವು ವಿಚಾರಣೆ ನಡೆಸುತ್ತಿತ್ತು. ಇಬ್ಬರು ನ್ಯಾಯಮೂರ್ತಿಗಳು ನಿವೃತ್ತಿ ಹೊಂದಿದ್ದರಿಂದ ಈ ಅರ್ಜಿಗಳ ವಿಚಾರಣೆಯು ಅರ್ಧಕ್ಕೆ ನಿಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.