ADVERTISEMENT

ಪಕ್ಷದಲ್ಲಿ ಗಾಂಧಿ ಕುಟುಂಬ ಸಕ್ರಿಯವಾಗಿರಲಿ: ಅಯ್ಯರ್‌

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 19:42 IST
Last Updated 23 ಜೂನ್ 2019, 19:42 IST
ಮಣಿಶಂಕರ್‌ ಅಯ್ಯರ್‌
ಮಣಿಶಂಕರ್‌ ಅಯ್ಯರ್‌   

ನವದೆಹಲಿ (ಪಿಟಿಐ): ‘ನೆಹರೂ– ಗಾಂಧಿ ಪರಿವಾರದ ಹೊರಗಿನ ವ್ಯಕ್ತಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾದರೂ, ಗಾಂಧಿ ಪರಿವಾರದವರು ಪಕ್ಷದೊಳಗೆ ಸಕ್ರಿಯರಾಗಿರುವುದು ಅಗತ್ಯ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಮಣಿಶಂಕರ್‌ ಅಯ್ಯರ್‌ ಹೇಳಿದ್ದಾರೆ.

ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅಯ್ಯರ್‌, ‘ಕಾಂಗ್ರೆಸ್‌ ಅಧ್ಯಕ್ಷರಾಗಿ ರಾಹುಲ್‌ ಮುಂದುವರಿದರೆ ಒಳ್ಳೆಯದೇ. ಆದರೆ ಅವರ ಅಭಿಪ್ರಾಯವನ್ನೂ ನಾವು ಗೌರವಿಸಬೇಕು. ನೆಹರೂ– ಗಾಂಧಿ ಪರಿವಾರದ ಹೊರತಾಗಿಯೂ ನಾವು ಉಳಿಯುತ್ತೇವೆ ಎಂಬ ವಿಶ್ವಾಸವಿದೆ. ಆದರೆ ಪಕ್ಷದೊಳಗೆ ಆಂತರಿಕವಾಗಿ ಗಂಭೀರ ಭಿನ್ನಾಭಿಪ್ರಾಯಗಳು ತಲೆದೋರಿದಾಗ ಈ ಕುಟುಂಬದವರೇ ಅದನ್ನು ಪರಿಹರಿಸಬೇಕಾಗುತ್ತದೆ. ಗಾಂಧಿ ಮುಕ್ತ ಕಾಂಗ್ರೆಸ್‌ ಮತ್ತು ಕಾಂಗ್ರೆಸ್‌ ಮುಕ್ತ ಭಾರತ’ ಎಂಬುದು ಬಿಜೆಪಿಯ ಕನಸು. ಅವರ ಚಿಂತನೆಗೆ ನಾವು ಬಲಿಯಾಗಬಾರದು ಎಂಬುದು ನನ್ನ ಉದ್ದೇಶ’ ಎಂದರು.

ಕಾಂಗ್ರೆಸ್‌ ಪಕ್ಷವನ್ನು ಸಂಘಟನಾತ್ಮಕವಾಗಿ ಮರು ರೂಪಿಸುವ ಅಗತ್ಯವಿದೆಯೇ ಎಂಬ ಪ್ರಶ್ನೆಗೆ, ‘ನೆಹರೂ– ಗಾಂಧಿ ಪರಿವಾರದ ಹೊರಗಿನ ವ್ಯಕ್ತಿ ಅನೇಕ ಬಾರಿ ಪಕ್ಷದ ಉನ್ನತ ಸ್ಥಾನದಲ್ಲಿ ಕುಳಿತಿದ್ದಾರೆ. ಅಂದು ಅನುಸರಿಸಿದ್ದ ತಂತ್ರವನ್ನು ಇಂದೂ ಅನುಸರಿಸಬಹುದು’ ಎಂದರು.

ADVERTISEMENT

‘ಸೋನಿಯಾ ಗಾಂಧಿ ನಮ್ಮ ಸಂಸದೀಯ ಪಕ್ಷದ ನಾಯಕಿ. ರಾಹುಲ್‌, ಸಂಸದೀಯ ಪಕ್ಷದ ಅವಿಭಾಜ್ಯ ಅಂಗವಾಗಿದ್ದಾರೆ. ಆದ್ದರಿಂದ ಪಕ್ಷದ ಉನ್ನತ ಸ್ಥಾನದಲ್ಲಿ ಯಾರೇ ಇದ್ದರೂ ಪಕ್ಷ ಮತ್ತೆ ಚೇತರಿಸಿಕೊಂಡು ಹಿಂದಿನ ಸ್ಥಿತಿಗೆ ಬರುತ್ತದೆ ಎಂಬ ವಿಶ್ವಾಸವಿದೆ ಎಂದರು.

ಪಕ್ಷದ ‘ಮೃದು ಹಿಂದುತ್ವ’ ನೀತಿಗೆ ಸೋಲಾಗಿದ್ದು ಮತ್ತೆ ‘ಜಾತ್ಯತೀತ’ ಸಿದ್ಧಾಂತಕ್ಕೆ ಮರಳುವ ಅಗತ್ಯಕಾಂಗ್ರೆಸ್‌ಗೆ ಇದೆಯೇ ಎಂಬ ಪ್ರಶ್ನೆಗೆ, ‘ಮೃದು ಹಿಂದುತ್ವ ಎಂಬ ವಿವರಣೆಯನ್ನೇ ನಾನು ತಿರಸ್ಕರಿಸುತ್ತೇನೆ. ಯಾಕೆಂದರೆ ಮೃದು ಹಿಂದುತ್ವದ ಪಕ್ಷವಾಗಬೇಕೆಂಬ ನಿಟ್ಟಿನಲ್ಲಿ ಕಾಂಗ್ರೆಸ್‌ ಪ್ರಯತ್ನ ಮಾಡಿದೆ ಎಂದು ನನಗೆ ಅನ್ನಿಸುವುದಿಲ್ಲ. ಆದರೆ ‘ಜಾತ್ಯತೀತ’ ಎಂಬ ಪದ ಬಳಸಲು ಸ್ವಲ್ಪ ಹಿಂಜರಿದು, ಅದಕ್ಕೆ ಪರ್ಯಾಯವಾಗಿ ‘ಬಹುತ್ವ’ ಎಂಬ ಪದವನ್ನು ಹೆಚ್ಚಾಗಿ ಬಳಸಿದೆ. ಇದು ಜಾತ್ಯತೀತತೆಯನ್ನು ಸಾಧಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯ ಪ್ರತೀಕವಾಗಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.