ADVERTISEMENT

ಗೋವಾ: ಲೋಬೊ, ಕಾಮತ್ ಅನರ್ಹತೆ– ಸ್ಪೀಕರ್‌ಗೆ ಕಾಂಗ್ರೆಸ್‌ ಅರ್ಜಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 15:49 IST
Last Updated 11 ಜುಲೈ 2022, 15:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಣಜಿ:ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಮೈಕಲ್‌ ಲೋಬೊ ಮತ್ತು ದಿಗಂಬರ ಕಾಮತ್‌ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಗೋವಾ ಕಾಂಗ್ರೆಸ್‌, ವಿಧಾನಸಭಾ ಸ್ಪೀಕರ್‌ಗೆ ಸೋಮವಾರ ಅರ್ಜಿ ಸಲ್ಲಿಸಿದೆ.

‘ಲೋಬೊ ಹಾಗೂ ಕಾಮತ್‌ ಅವರು ಆಡಳಿತಾರೂಢ ಬಿಜೆಪಿಯೊಂದಿಗೆ ಸೇರಿಕೊಂಡು ಕಾಂಗ್ರೆಸ್‌ ಪಕ್ಷವನ್ನು ಇಬ್ಭಾಗ ಮಾಡುವ ಹುನ್ನಾರ ನಡೆಸಿದ್ದಾರೆ’ ಎಂದು ಕಾಂಗ್ರೆಸ್‌ ದೂರಿದೆ.

‘ಲೋಬೊ ಹಾಗೂ ಕಾಮತ್‌ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿದ್ದೇವೆ. ಲೋಬೊ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನದಿಂದ ವಜಾಗೊಳಿಸಿರುವ ವಿಚಾರವನ್ನೂ ಸ್ಪೀಕರ್‌ ಗಮನಕ್ಕೆ ತಂದಿದ್ದೇವೆ’ ಎಂದು ಗೋವಾ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಮಿತ್‌ ಪಾಟ್ಕರ್‌ ತಿಳಿಸಿದ್ದಾರೆ.

ADVERTISEMENT

‘ಅಗತ್ಯವಿರುವಷ್ಟು ಶಾಸಕರನ್ನು ಸೆಳೆಯಲು ಬಿಜೆಪಿಗೆ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಒಡೆಯುವ ಅದರ ತಂತ್ರಗಾರಿಕೆಯನ್ನು ನಾವು ವಿಫಲಗೊಳಿಸಿದ್ದೇವೆ. ಹಣ ಹಾಗೂ ತೋಳ್ಬಲದ ಮೂಲಕ ಮಹಾರಾಷ್ಟ್ರದಂತೆ ರಾಜ್ಯದಲ್ಲೂ ಪ್ರತಿಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿ ಮುಂದಾಗಿತ್ತು. ತಾನು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ವಿರೋಧಪಕ್ಷಗಳ ಅಸ್ತಿತ್ವವೇ ಇಲ್ಲದಂತೆ ಮಾಡುವುದು ಆ ಪ‍ಕ್ಷದ ಉದ್ದೇಶ’ ಎಂದು ಆರೋಪಿಸಿದ್ದಾರೆ.

ಪಕ್ಷಕ್ಕೆ ಆಗುತ್ತಿರುವ ಹಾನಿ ತಪ್ಪಿಸುವ ಉದ್ದೇಶದಿಂದ ಮುಕುಲ್‌ ವಾಸ್ನಿಕ್‌ ಅವರನ್ನುಕಾಂಗ್ರೆಸ್‌ ವರಿಷ್ಠರು ಗೋವಾಕ್ಕೆ ಕಳುಹಿಸಿದ್ದರು. ಅವರು ಶಾಸಕರ ಮನವೊಲಿಸಿದ್ದಾರೆ ಎಂದು ಹೇಳಲಾಗಿದೆ.

‘ಕಾಂಗ್ರೆಸ್‌ನಲ್ಲಿ ಆಗುತ್ತಿರುವ ಬೆಳವಣಿಗೆಗಳಿಗೆ ನಮ್ಮ ಪಕ್ಷ ಹೊಣೆಯಲ್ಲ. ಆ‍ಪಕ್ಷವನ್ನು ಒಡೆಯುವ ಕೆಲಸಕ್ಕೆ ನಾವು ಕೈಹಾಕಿಲ್ಲ. ಇದುವರೆಗೂ ಆ ಪಕ್ಷದ ಯಾರೊಬ್ಬರೂ ನನ್ನನ್ನು ಸಂಪರ್ಕಿಸಿಲ್ಲ’ ಎಂದು ಗೋವಾ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸದಾನಂದ ಶೇಟ್‌ ತನವಾಡೆ ತಿಳಿಸಿದ್ದಾರೆ.

ಅಧಿವೇಶನಕ್ಕೆ ಹಾಜರಾದ ಶಾಸಕರು

ಪಕ್ಷದ ಸಭೆಗಳಿಂದ ದೂರ ಉಳಿದಿದ್ದ ಕಾಂಗ್ರೆಸ್‌ ಶಾಸಕರಾದ ಮೈಕಲ್‌ ಲೋಬೊ, ದಿಗಂಬರ ಕಾಮತ್‌, ಡೆಲಿಲಾ ಲೋಬೊ, ಕೇದಾರ್‌ ನಾಯ್ಕ ಹಾಗೂ ರಾಜೇಶ್‌ ಫಾಲ್‌ದೇಸಾಯಿ ಅವರು ಸೋಮವಾರ ಅಧಿವೇಶನಕ್ಕೆ ಹಾಜರಾದರು.

ಸುದ್ದಿಗಾರರ ಜೊತೆ ಮಾತನಾಡಿದ ಲೋಬೊ, ‘ನಾನು ಕಾಂಗ್ರೆಸ್‌ ಪಕ್ಷದಲ್ಲೇ ಇದ್ದೇನೆ. ಅಧಿವೇಶನದಲ್ಲೂ ಭಾಗವಹಿಸುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

‘ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಪಕ್ಷವು ನನ್ನನ್ನು ಮೂಲೆಗುಂಪು ಮಾಡಲು ಯತ್ನಿಸಿತ್ತು. ಪಕ್ಷದ ಮುಖಂಡರು ನಡೆಸಿಕೊಂಡ ರೀತಿ ತುಂಬಾ ನೋವು ಉಂಟು ಮಾಡಿತ್ತು. ಇಷ್ಟಾದರೂ ಈಗಲೂ ಕಾಂಗ್ರೆಸ್‌ನಲ್ಲೇ ಇದ್ದೇನೆ’ ಎಂದುದಿಗಂಬರ ಕಾಮತ್‌ ಹೇಳಿದ್ದಾರೆ.

‘ನಮ್ಮೊಂದಿಗೆ 7 ಶಾಸಕರು ಇದ್ದಾರೆ’

‘ನಮ್ಮೊಂದಿಗೆ ಸದ್ಯ ಏಳು ಮಂದಿ ಶಾಸಕರು ಇದ್ದಾರೆ’ ಎಂದು ಅಮಿತ್‌ ಪಾಟ್ಕರ್‌ ಹೇಳಿದ್ದಾರೆ.

‘ಭಾನುವಾರ ನಮ್ಮೊಂದಿಗೆ ಐವರು ಇದ್ದರು. ಅಲೆಕ್ಸೊ ಸೀಕ್ವೆರಾ ಪಕ್ಷದಲ್ಲೇ ಉಳಿಯುವುದಾಗಿ ಹೇಳಿದ್ದಾರೆ. ಬಂಡಾಯ ಬಣದಲ್ಲಿ ಗುರುತಿಸಿಕೊಂಡಿದ್ದ ಮತ್ತೋರ್ವ ಶಾಸಕ ಸದ್ಯ ನಮ್ಮ ಸಂಪರ್ಕದಲ್ಲಿದ್ದಾರೆ’ ಎಂದು ತಿಳಿಸಿದ್ದಾರೆ.

ರಹಸ್ಯ ಸ್ಥಳಕ್ಕೆ ಶಾಸಕರು

ಪಕ್ಷದ ಮತ್ತಷ್ಟು ಶಾಸಕರು ಲೋಬೊ ಹಾಗೂ ದಿಗಂಬರ ಕಾಮತ್ ಅವರ ಬಣ ಸೇರುವುದನ್ನು ತಪ್ಪಿಸುವ ಸಲುವಾಗಿ ಕಾಂಗ್ರೆಸ್‌ ನಾಯಕರು ತಮ್ಮ ಸಂಪರ್ಕದಲ್ಲಿದ್ದ ಐವರು ಶಾಸಕರನ್ನು ಭಾನುವಾರ ರಹಸ್ಯ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಸೋಮವಾರ ಅವರೆಲ್ಲಾ ಒಟ್ಟಾಗಿ ಅಧಿವೇಶನಕ್ಕೆ ಹಾಜರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.