ADVERTISEMENT

ಲಾಭದಾಯಕ ಸರ್ಕಾರಿ ಕಂಪನಿಗಳ ಮಾರಾಟ ಮಾಡಬಾರದು, ಬಲಪಡಿಸಬೇಕು: ಕಾಂಗ್ರೆಸ್

ಪಿಟಿಐ
Published 5 ಮಾರ್ಚ್ 2021, 14:21 IST
Last Updated 5 ಮಾರ್ಚ್ 2021, 14:21 IST
ರಾಜೀವ್ ಶುಕ್ಲಾ (ಚಿತ್ರ ಕೃಪೆ: ಟ್ವಿಟರ್)
ರಾಜೀವ್ ಶುಕ್ಲಾ (ಚಿತ್ರ ಕೃಪೆ: ಟ್ವಿಟರ್)   

ನವದೆಹಲಿ: ಕೇಂದ್ರ ಸರ್ಕಾರವು ಲಾಭದಾಯಕ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಖಾಸಗಿಕರಣ ಪ್ರಕ್ರಿಯೆಯ ಬಗ್ಗೆ ಮರುಚಿಂತನೆ ಮಾಡುವುದರ ಜತೆಗೆ, ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಬಲಪಡಿಸುವ ಕೆಲಸ ಮಾಡಬೇಕು ಎಂದು ಅದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

‘ಕೇಂದ್ರ ಸರ್ಕಾರದ ಆರ್ಥಿಕ ಮಾದರಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದೆಡೆ, ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಮೇಲಿನ ತೆರಿಗೆಗಳನ್ನು ಹೆಚ್ಚಿಸುತ್ತಿದೆ. ಮತ್ತೊಂದೆಡೆ, ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ ಸ್ವತ್ತುಗಳ ಮಾರಾಟ ಮಾಡುವುದನ್ನು ಎದುರುನೋಡುತ್ತಿದೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ರಾಜೀವ್ ಶುಕ್ಲಾ ಹೇಳಿದ್ದಾರೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಯುಪಿಎ ಸರ್ಕಾರದ ಅವಧಿಯಲ್ಲಿ ಇದ್ದುದಕ್ಕಿಂತ ಅರ್ಧಕ್ಕಿಂತಲೂ ಹೆಚ್ಚು ಕಡಿಮೆಯಾಗಿದೆ. ಆದರೆ ದೇಶದಲ್ಲಿ ಇಂಧನ ದರ ಗಗನಮುಖಿಯಾಗಿದೆ ಎಂದು ಅವರು ಹೇಳಿದ್ದಾರೆ.

‘ಆ ಸಮಯದಲ್ಲಿ ನಟರೂ (ಯುಪಿಎ ಅವಧಿಯಲ್ಲಿ) ಮಾತನಾಡುತ್ತಿದ್ದರು. ಈಗ ಅವರೂ ಮೌನ ತಾಳಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

‘ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಫಲವಾಗಿಯೇ ಸರ್ಕಾರವು ಇಂದು ಅಸ್ತಿತ್ವದಲ್ಲಿದೆ. ಎಲ್ಲವನ್ನೂ ಖಾಸಗೀಕರಣಗೊಳಿಸಿದರೆ ಸರ್ಕಾರವು ಕೇವಲ ನಾರ್ತ್ ಬ್ಲಾಕ್ ಮತ್ತು ಸೌತ್ ಬ್ಲಾಕ್‌ಗಳಿಗೆ ಸೀಮಿತವಾಗಿರಲಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.