ADVERTISEMENT

ಜನಸಂಖ್ಯೆ ನಿಯಂತ್ರಣಕ್ಕಾಗಿ ಅನೈಚ್ಛಿಕ ಮಾದರಿ ಬಳಸುವುದಿಲ್ಲ: ಕೇಂದ್ರ ಸರ್ಕಾರ

ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 14:19 IST
Last Updated 12 ಡಿಸೆಂಬರ್ 2020, 14:19 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಜನಸಂಖ್ಯಾ ನಿಯಂತ್ರಣಕ್ಕಾಗಿ ಕುಟುಂಬ ಯೋಜನೆಯಲ್ಲಿ ‘ಅನೈಚ್ಛಿಕ ಮಾದರಿ’ಯನ್ನು ಬಳಸುವುದಕ್ಕೆ ಕೇಂದ್ರ ಸರ್ಕಾರದ ವಿರೋಧವಿದೆ. ಇಂತಿಷ್ಟೇ ಮಕ್ಕಳನ್ನು ಹೊಂದಬೇಕು ಎನ್ನುವ ನಿರ್ಬಂಧದಿಂದ ಯಾವುದೇ ಫಲವಿಲ್ಲ ಎನ್ನುವುದನ್ನು ಅಂತರರಾಷ್ಟ್ರೀಯ ಅನುಭವಗಳು ತೋರಿಸಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಶನಿವಾರ ತಿಳಿಸಿದೆ.

‘ದೇಶದಲ್ಲಿರುವ ಕುಟುಂಬ ಯೋಜನೆಯು ಸ್ವಯಂಪ್ರೇರಿತ ಮಾದರಿಯಲ್ಲಿದೆ. ಕುಟುಂಬದಲ್ಲಿ ಎಷ್ಟು ಮಕ್ಕಳಿರಬೇಕು ಎನ್ನುವುದನ್ನು ನಿರ್ಧರಿಸುವ ಅಧಿಕಾರ ಹಾಗೂ ಕುಟುಂಬ ಯೋಜನೆ ಮಾದರಿಯನ್ನು ಅನುಸರಿಸುವ ಆಯ್ಕೆಯನ್ನು ನಿರ್ಬಂಧವಿಲ್ಲದೆ, ಆಯಾ ಜೋಡಿಗೆ ಬಿಡಲಾಗಿದೆ’ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

‘ಎರಡು ಮಕ್ಕಳ ನೀತಿ’ಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಬಿಜೆಪಿ ನಾಯಕ, ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗೆ ಪ್ರತಿಯಾಗಿ, ಅಫಿಡವಿಟ್‌ ಮುಖಾಂತರ ಸಚಿವಾಲಯ ಪ್ರತಿಕ್ರಿಯೆ ದಾಖಲಿಸಿದೆ.

ADVERTISEMENT

‘ಅದಕ್ಕಿಂತಲೂ ಮಿಗಿಲಾಗಿ, 2000ನೇ ಇಸವಿಯಲ್ಲಿ ರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಭಾರತವು ಅಂಗೀಕರಿಸಿದಾಗ,ಫಲವತ್ತತೆ ದರವು (ಟೋಟಲ್‌ ಫರ್ಟಿಲಿಟಿ ರೇಟ್‌-ಟಿಆರ್‌ಎಫ್‌) 3.2ರಷ್ಟಿತ್ತು. ಇದೀಗ ಈ ಪ್ರಮಾಣ ಶೇ 2.2ಕ್ಕೆ ಇಳಿಕೆಯಾಗಿದ್ದು, ಜೋಡಿಯು ಸರಾಸರಿಯಾಗಿ ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಬಯಸುತ್ತಿಲ್ಲ ಎನ್ನುವುದರ ಸೂಚ್ಯವಾಗಿದೆ. 36 ರಾಜ್ಯಗಳ ಪೈಕಿ 25ಕ್ಕೂ ಅಧಿಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಫಲವತ್ತತೆಯ ದರ 2.1 ಅಥವಾ ಅದಕ್ಕಿಂತ ಕಡಿಮೆಯನ್ನು ಸಾಧಿಸಿವೆ’ ಎಂದು ಉಲ್ಲೇಖಿಸಿದೆ.

‘ಸಾರ್ವಜನಿಕ ಆರೋಗ್ಯ’ ವಿಷಯವು ಆಯಾ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತವೆ. ಆರೋಗ್ಯ ಕ್ಷೇತ್ರದಲ್ಲಿನ ಸುಧಾರಣೆಗೆ ರಾಜ್ಯ ಸರ್ಕಾರಗಳು ನಿರ್ಧಾರ ಕೈಗೊಳ್ಳಬೇಕು ಎಂದೂ ಸಚಿವಾಲಯವು ಹೇಳಿದೆ.

ಸಚಿವಾಲಯದ ಅಫಿಡಾವಿಟ್‌ಗೆ ಪ್ರತಿಕ್ರಿಯೆ ನೀಡಿರುವ ಉಪಾಧ್ಯಾಯ ಅವರು, ‘ಜನಸಂಖ್ಯಾ ನಿಯಂತ್ರಣ ಹಾಗೂ ಕುಟುಂಬ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡಕ್ಕೂ ಸಂಬಂಧಿಸುವ ವಿಷಯವಾಗಿದೆ ಎನ್ನುವ ಮಾಹಿತಿ ಅಧಿಕಾರಿಗಳಿಗೆ ಇಲ್ಲದೇ ಇರುವುದು ದುರ್ದೈವದ ವಿಷಯ. ಜನಸಂಖ್ಯಾ ನಿಯಂತ್ರಣ ಕಾನೂನನ್ನು ತರುವ ಅಧಿಕಾರ ಕೇಂದ್ರಕ್ಕೂ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.