ADVERTISEMENT

ಕುಂದು–ಕೊರತೆಗಳಿಗೆ 30 ದಿನಗಳಲ್ಲೇ ಪರಿಹಾರ: ಕೇಂದ್ರ ನಿರ್ಧಾರ

ಕೇಂದ್ರೀಕೃತ ದೂರು ಸಲ್ಲಿಕೆ ವ್ಯವಸ್ಥೆಯಲ್ಲಿ ಸುಧಾರಣೆ

ಪಿಟಿಐ
Published 29 ಜುಲೈ 2022, 11:46 IST
Last Updated 29 ಜುಲೈ 2022, 11:46 IST
ಜಿತೇಂದ್ರ ಸಿಂಗ್
ಜಿತೇಂದ್ರ ಸಿಂಗ್   

ನವದೆಹಲಿ: ವಿವಿಧ ಇಲಾಖೆಗಳ ಜಾಲತಾಣಗಳ ಮೂಲಕ ಸಾರ್ವಜನಿಕರು ಸಲ್ಲಿಸುವ ಕುಂದು–ಕೊರತೆಗಳಿಗೆ ಗರಿಷ್ಠ 30 ದಿನಗಳ ಒಳಗಾಗಿ ಪರಿಹಾರ ನೀಡುವ ವ್ಯವಸ್ಥೆ ರೂಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪ್ರಸ್ತುತ, ಜಾಲತಾಣಗಳ ಮೂಲಕ ಸಲ್ಲಿಕೆಯಾಗುವ ಕುಂದು–ಕೊರತೆಗಳಿಗೆ ಪರಿಹಾರ ಒದಗಿಸಲು ಗರಿಷ್ಠ 45 ದಿನಗಳ ಕಾಲಮಿತಿ ಇದೆ.

ಅಲ್ಲದೇ, ವ್ಯಕ್ತಿಯೊಬ್ಬರು ಸಲ್ಲಿಸುವ ದೂರಿನ ವಿರುದ್ಧವಾಗಿ ಸಲ್ಲಿಕೆಯಾಗುವ ಅರ್ಜಿಯನ್ನು ವಿಲೇವಾರಿ ಮಾಡದ ಹೊರತು, ಆ ದೂರನ್ನು ಮುಕ್ತಾಯಗೊಳಿಸದಿರಲು ಸಹ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರದ ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ಕುಂದುಕೊರತೆ ಇಲಾಖೆಯು (ಡಿಎಆರ್‌ಪಿಜಿ) ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

‘ಜನರು ಸಲ್ಲಿಸುವ ದೂರುಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವ ಸಲುವಾಗಿ ‘ಕೇಂದ್ರೀಕೃತ ಸಾರ್ವಜನಿಕ ವ್ಯಾಜ್ಯ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆ’ಯಲ್ಲಿ (ಸಿಪಿಜಿಆರ್‌ಎಎಂಎಸ್‌) ಸಮಗ್ರ ಸುಧಾರಣೆ ತರಲಾಗಿದೆ’ ಎಂದೂ ಇಲಾಖೆ ತಿಳಿಸಿದೆ.

‘ಪರಿಹಾರ ಒದಗಿಸಲು ಇದ್ದ ಅವಧಿಯನ್ನು 30 ದಿನಗಳಿಗೆ ಇಳಿಕೆ ಮಾಡಿರುವುದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅನುಸರಿಸುತ್ತಿರುವ ‘ನಂಬಿಕೆ ಆಧರಿತ ಆಡಳಿತ ಮಾದರಿ’ಯನ್ನು ಪ್ರತಿಫಲಿಸುತ್ತದೆ’ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ.

‘ತಂತ್ರಜ್ಞಾನದಲ್ಲಿನ ಪ್ರಗತಿಯಿಂದ ಇದು ಸಾಧ್ಯವಾಗಿದೆ’ ಎಂದು ಡಿಎಆರ್‌ಪಿಜಿ ಕಾರ್ಯದರ್ಶಿ ವಿ.ಶ್ರೀನಿವಾಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.