ADVERTISEMENT

ಪ್ರವಾಹ: ತಕ್ಷಣದ ಮಾಹಿತಿಗೆ ‘ಫ್ಲಡ್ ವಾಚ್’ ಆ್ಯಪ್‌

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2023, 16:36 IST
Last Updated 17 ಆಗಸ್ಟ್ 2023, 16:36 IST

ನವದೆಹಲಿ: ದೇಶದ ಹಲವೆಡೆ ಪ್ರವಾಹಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ತಕ್ಷಣದ ಮಾಹಿತಿ ತಲುಪಿಸಲು ಸರ್ಕಾರ ಗುರುವಾರ ‘ಫ್ಲ‌ಡ್‌ ವಾಚ್‌’ ಆ್ಯಪ್‌ ಆರಂಭಿಸಿದೆ. 

338 ಕೇಂದ್ರಗಳಿಂದ ‘ಫ್ಲಡ್‌ ವಾಚ್‌’ ಸಂಗ್ರಹಿಸುವ ಮಾಹಿತಿಯನ್ನು 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿಸಲಾಗುತ್ತದೆ. ಈ ಆ್ಯಪ್ ಪ್ರವಾಹ ಸಂಬಂಧಿತ ಮಾಹಿತಿ ಪ್ರಸಾರ ಮಾಡಲು ಮೊಬೈಲ್ ಫೋನ್‌ಗಳನ್ನು ಬಳಸುವ ಉದ್ದೇಶ ಹೊಂದಿದ್ದು, 7 ದಿನದ ಮುನ್ಸೂಚನೆ ಸಹ ನೀಡುತ್ತದೆ ಎಂದು ಕೇಂದ್ರ ಜಲ ಆಯೋಗದ(ಸಿಡಬ್ಲ್ಯುಸಿ) ಅಧ್ಯಕ್ಷ ಕುಶ್ವೀಂದರ್ ವೋಹ್ರಾ ಹೇಳಿದರು.

ಪ್ರವಾಹ ಕುರಿತು ನಿಖರ ಮತ್ತು ಸಕಾಲಿಕ ಮುನ್ಸೂಚನೆ ತಲುಪಿಸಲು ಈ ಅಪ್ಲಿಕೇಶನ್ ಉಪಗ್ರಹ ಕಳುಹಿಸುವ ದತ್ತಾಂಶ ವಿಶ್ಲೇಷಣೆ, ಗಣಿತದ ಮಾದರಿ ಮತ್ತು ವಿವಿಧ ಸುಧಾರಿತ ತಂತ್ರಜ್ಞಾನಗಳನ್ನು ಬಳಸುತ್ತದೆ. 

ADVERTISEMENT

ಬಳಕೆದಾರ ಸ್ನೇಹಿ ಆ್ಯಪ್ ಲಿಖಿತ ಮತ್ತು ಆಡಿಯೊ ರೂಪದಲ್ಲಿ ಎಚ್ಚರಿಕೆ ಸಂದೇಶ ಮತ್ತು ಪ್ರವಾಹ ಮುನ್ಸೂಚನೆ ಕಳುಹಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾಹಿತಿ ಒದಗಿಸುತ್ತಿದ್ದು, ಶೀಘ್ರದಲ್ಲೇ ಇತರ ಪ್ರಾದೇಶಿಕ ಭಾಷೆಗಳಿಗೆ ವಿಸ್ತರಿಸಲಾಗುವುದು. ಸಿಡಬ್ಲ್ಯುಸಿ ಆಂತರಿಕವಾಗಿ ಅಭಿವೃದ್ಧಿ ಪಡಿಸಿದ ಈ ಆ್ಯಪ್ ಇನ್ನೂ ಪ್ರವಾಹ ಪೀಡಿತ ಹಿಮಾಚಲ ಪ್ರದೇಶದೊಂದಿಗೆ ಸಂಪರ್ಕ ಹೊಂದಿಲ್ಲ ಎಂದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.