
ನವದೆಹಲಿ: ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಗಳಲ್ಲಿ ವಾರ್ಷಿಕ ಜಮೆ ಮಾಡಬೇಕಿದ್ದ ಕನಿಷ್ಠ ಠೇವಣಿ ಮೊತ್ತವನ್ನು ಸರ್ಕಾರ ಕಡಿಮೆ ಮಾಡಿದೆ. ಇದರಿಂದಾಗಿ ಈ ಯೋಜನೆಯ ಲಾಭ ಪಡೆಯುವ ಫಲಾನುಭವಿಗಳ ಸಂಖ್ಯೆ ಏರಿಕೆಯಾಗಿದೆ.
ಹೆಣ್ಣು ಮಕ್ಕಳಿಗಾಗಿ ಉಳಿತಾಯ ಮಾಡುವ ಈ ಯೋಜನೆಯಲ್ಲಿ ಪೋಷಕರು ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ ₹1,000 ಮೊತ್ತವನ್ನು ಖಾತೆಗೆ ಜಮೆ ಮಾಡಬೇಕಿತ್ತು. ಸುಕನ್ಯಾ ಸಮೃದ್ಧಿ ಖಾತೆ ನಿಯಮಗಳು–2016ಕ್ಕೆ ಸರ್ಕಾರ ತಿದ್ದುಪಡಿ ತಂದು, ಈಗ ಅದನ್ನು ಕನಿಷ್ಠ ₹250ಕ್ಕೆ ಇಳಿಸಿದೆ.
ಯೋಜನೆ ‘ಅದ್ಭುತ ಯಶಸ್ಸು’ ಕಂಡಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಈ ವರ್ಷದ ಬಜೆಟ್ ಭಾಷಣದಲ್ಲೂ ಹೇಳಿದ್ದರು.
ಸಣ್ಣ ಉಳಿತಾಯ ಖಾತೆಗಳಿಗೆ ನೀಡುವಂತೆಯೇ ಸುಕನ್ಯಾ ಸಮೃದ್ಧಿ ಖಾತೆಗಳ ಠೇವಣಿಗೂ ಸರ್ಕಾರ ಬಡ್ಡಿ ನೀಡುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ತ್ರೈಮಾಸಿಕ ಅವಧಿಗೆ ಬಡ್ಡಿ ದರ ಪರಿಷ್ಕರಿಸುತ್ತದೆ. ಠೇವಣಿ ಹಣಕ್ಕೆ ಆಯಾಯ ವರ್ಷದ ಆದಾಯ ತೆರಿಗೆಯಲ್ಲಿ ಸೆಕ್ಷನ್ 80ಸಿಯಡಿ ತೆರಿಗೆ ವಿನಾಯಿತಿಯೂ ಇದೆ.
10 ವರ್ಷದೊಳಗಿನ ಯಾವುದೇ ಹೆಣ್ಣುಮಗುವಿನ ಹೆಸರಿನಲ್ಲಿ ಅವರ ಹೆತ್ತವರು ಅಥವಾ ಕಾನೂನುಬದ್ಧ ಪೋಷಕರು ಅಂಚೆ ಕಚೇರಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು. ಆ ಮಗು 18 ವರ್ಷ ತುಂಬಿದ ನಂತರ ಖಾತೆಯಲ್ಲಿರುವ ಹಣ ಪಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.