ADVERTISEMENT

ಕಪ್ಪುಶಿಲೀಂಧ್ರ: ಸಾಂಕ್ರಾಮಿಕ ರೋಗವಾಗಿ ಪರಿಗಣಿಸಲು ರಾಜ್ಯಗಳಿಗೆ ಕೇಂದ್ರ ಸೂಚನೆ

ಪಿಟಿಐ
Published 20 ಮೇ 2021, 11:57 IST
Last Updated 20 ಮೇ 2021, 11:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಪ್ಪು ಶಿಲೀಂಧ್ರ ಸೋಂಕು ಅಥವಾ ಮುಕೊರ್‌ಮೈಕೊಸಿಸ್‌ ಅನ್ನು 1897ರ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಸಾಂಕ್ರಾಮಿಕ ರೋಗ ಎಂಬುದಾಗಿ ಪರಿಗಣಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಗುರುವಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

‘ಈ ರೋಗವು ಕೋವಿಡ್‌–19 ಪೀಡಿತರಲ್ಲಿ ಸುದೀರ್ಘ ಕಾಲದ ಅಸ್ವಸ್ಥತೆ ಅಥವಾ ಸಾವಿಗೆ ಕಾರಣವಾಗಲಿದೆ’ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರವಾಲ್‌ ಈ ಕುರಿತ ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

’ಕಪ್ಪು ಶಿಲೀಂಧ್ರ ರೋಗವು ಹೊಸ ಸವಾಲಾಗಿ ಪರಿಣಮಿಸಿದೆ. ವಿವಿಧ ರಾಜ್ಯಗಳಲ್ಲಿ ಕೋವಿಡ್‌ ಪೀಡಿತರಲ್ಲಿ ಮುಖ್ಯವಾಗಿ ಈಗಾಗಲೇ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದವರು ಹಾಗೂ ಸ್ಟಿರಾಯ್ಡ್‌ ಚಿಕಿತ್ಸೆಯಲ್ಲಿ ಇದ್ದವರಲ್ಲಿ ಕಾಣಿಸಿಕೊಂಡಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಈ ಸೋಂಕಿಗೆ ಬಹುಶಿಸ್ತೀಯ ಚಿಕಿತ್ಸೆಯ ಅಗತ್ಯವಿದೆ. ಅಂದರೆ, ನೇತ್ರ ತಜ್ಞರು, ಇಎನ್‌ಟಿ ಪರಿಣತರು, ಜನರಲ್ ಸರ್ಜನ್‌ಗಳು, ನರರೋಗ ತಜ್ಞರು, ದಂತವೈದ್ಯರ ಸೇವೆ ಅಗತ್ಯ. ಇದಕ್ಕೆ ನಿರೋಧಕ ಔಷಧವಾಗಿ ಅಂಫೋಟೆರಿಸಿನ್‌ ಲಸಿಕೆಯನ್ನು ನೀಡಬೇಕಾಗಿದೆ ಎಂದು ಸಲಹೆ ಮಾಡಿದ್ದಾರೆ.

ಈ ಸೋಂಕನ್ನು ಸಾಂಕ್ರಾಮಿಕ ರೋಗ ಎಂದು ಪರಿಗಣಿಸಬೇಕು. ತಪಾಸಣೆ, ಪರೀಕ್ಷೆಗೆ ಸಂಬಂಧಿಸಿ ಸರ್ಕಾರ ಮತ್ತು ಖಾಸಗಿಯ ಎಲ್ಲ ಆಸ್ಪತ್ರೆಗಳು ಆಗಿಂದಾಗ್ಗೆ ಆರೋಗ್ಯ ಸಚಿವಾಲಯ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಬಿಡುಗಡೆ ಮಾಡುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕು ಎಂದು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.

ಶಂಕಿತ ಅಥವಾ ದೃಡೀಕೃತ ಎಲ್ಲ ಪ್ರಕರಣಗಳ ಕುರಿತು ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ (ಐಡಿ‌ಎಸ್‌ಪಿ) ಮೂಲಕ ಆರೋಗ್ಯ ಇಲಾಖೆಗೆ ವರದಿ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.